ಉಡುಪಿ : ಮಣಿಪಾಲ ಶಿಕ್ಷಣ ಸಂಸ್ಥೆಯೊಂದರಲ್ಲಿ ಪ್ರಥಮ ವರ್ಷದ ಎಂಎಸ್ಸಿ ಫೋರೆನ್ಸಿಕ್ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬಿಹಾರ ಮೂಲದ ದೃಷ್ಟಿ ರಾಣಿ (24) ಆತ್ಮಹತ್ಯೆ ಮಾಡಿಕೊಂಡವರು.

ವಿದ್ಯಾರ್ಥಿನಿಗೆ ಸುಮಾರು ಒಂದು ವರ್ಷದಿಂದ ಮಾನಸಿಕ ಸಮಸ್ಯೆ ಇದ್ದು ಚಿಕಿತ್ಸೆ ಪಡೆಯಲಾಗುತ್ತಿತ್ತು ಎಂದು ತಿಳಿದುಬಂದಿದೆ. ನವೆಂಬರ್ 30ರಂದು ಸಂಜೆ ತಮ್ಮ ಸಹೋದರಿಗೆ ಕರೆಮಾಡಿ, ಓದಿದರೂ ನೆನಪಿನಲ್ಲಿ ಉಳಿಯುತ್ತಿಲ್ಲ, ಪರೀಕ್ಷೆ ಹತ್ತಿರ ಬಂದಿದೆ… ತುಂಬಾ ಕಷ್ಟವಾಗುತ್ತಿದೆ ಎಂದು ಹೇಳಿ ಕರೆಯನ್ನು ಕಡಿತಗೊಳಿಸಿದ್ದಳೆಂದು ಕುಟುಂಬಸ್ಥರು ತಿಳಿಸಿದ್ದಾರೆ.

ವೈಯಕ್ತಿಕ ಕಾರಣಗಳು ಅಥವಾ ಮಾನಸಿಕ ಒತ್ತಡದಿಂದ ಜೀವನದಲ್ಲಿ ಜಿಗುಪ್ಸೆ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ನಿಲಯದ ಕೊಠಡಿಯಲ್ಲಿ ಫ್ಯಾನ್ಗೆ ಬೆಡ್ಶೀಟ್ ಮೂಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



