ಉಡುಪಿ : ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬ್ರಹ್ಮಾವರ ಪೊಲೀಸ್ ರು ಬೆಳ್ತಂಗಡಿಗೆ ತೆರಳಿ ವಶಕ್ಕೆ ಪಡೆದ ಘಟನೆ ನಡೆದಿದೆ. ಆಗಸ್ಟ ೧೬ರಂದು ಫೇಸ್ ಬುಕ್ ನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಹೇಳನ ಮಾಡಿ ಬೇರೆ ಬೇರೆ ಧರ್ಮದ ಹಾಗೂ ಸಮುದಾಯದ ನಡುವೆ ದ್ವೇಷ ಉಂಟು ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಡುಪಿ ಬಿಜೆಪಿ ಗ್ರಾಮಾಂತರದ ರಾಜೀವ್ ಕುಲಾಲ್, ತಿಮರೋಡಿ ಅವರ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರು ಪಡೆದು ಪ್ರಕರಣ ದಾಖಲಾದ ಬಳಿಕ ಆ ೨೦ ರಂದು ಈ ಕುರಿತು ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ನೋಟೀಸ್ ನೀಡಲು ಬಂದಾಗ ಒಂದಿಷ್ಟು ಮಾತಿನ ಚಕುಮಕಿ ನಡೆದಿತ್ತು. ೨ ಬಾರಿ ಇದೇ ಪುನರಾವರ್ತನೆಯಾದ ಹಿನ್ನಲೆಯಲ್ಲಿ ಇಂದು ಉಡುಪಿ ಜಿಲ್ಲಾ ಎಡಿಷನ್ ಎಸ್ಪಿ ಸುಧಾಕರ್ ಹೆಗ್ಡೆ ನೇತೃತ್ವದಲ್ಲಿ 9 ಪೊಲೀಸ್ ವಾಹನದಲ್ಲಿ ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ತೆರಳಿದ ತಂಡ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆದು ಬೀಗಿ ಪೊಲೀಸ್ ಬಂದೋಬಸ್ತ್ ನಡುವೆ ಬ್ರಹ್ಮಾವರಕ್ಕೆ ಕರೆತರಲಾಯಿತು. ಪೊಲೀಸ್ ವಶಕ್ಕೂ ಮೊದಲು ಪೊಲೀಸ್ ರು ಮತ್ತು ತಿಮರೋಡಿ ಅವರ ನಡುವೆ ವಾದ ವಿವಾದಗಳು ನಡೆದಿದ್ದು, ಈ ವೇಳೆ ಜೊತೆಗೆ ಇದ್ದ ಗಿರೀಶ್ ಮಟ್ಟಣ್ಣ, ಜಯಂತ್ ಟಿ. ಅವರನ್ನು ಕಾರಿನಲ್ಲಿ ಬಂದೋಬಸ್ತ್ ಮೂಲಕ ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಲಾಗಿದೆ.

ಮಹೇಶ್ ಶೆಟ್ಟಿ ಅವರನ್ನು ಕರೆತರುವಾಗ ದಾರಿಯುದ್ಧಕ್ಕೂ ಹಲವರು ಸ್ವಾಗತ ಕೋರಿದರೆ, ಇನ್ನೊಂದು ಕಡೆ ದಿಕ್ಕಾರ ಕೂಗುವ ದೃಶ್ಯ ಕಂಡು ಬಂತು. ಸದ್ಯ ಬ್ರಹ್ಮಾವರ ಪೊಲೀಸ್ ಠಾಣೆಯ ಬಳಿ ಭಾರಿ ಜನ ಸೇರಿರುವ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯ ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023ರ ಕಲಂ 163 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಇದಲ್ಲದೇ ಪ್ರಕರಣದ ಸೂಕ್ಷ್ಮತೆ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿಯನ್ನು ಆಧರಿಸಿ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲಾಗಿದ್ದು, ನಾಳೆ ಮಧ್ಯಾಹ್ನ 1.00 ಗಂಟೆಯ ವರೆಗೆ ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
