ಬೆಂಗಳೂರು: ಮಹಿಳೆಯರು ಮೌನವಾಗಿರಬೇಕೆಂಬ ಹಳೆಯ ಮನೋಭಾವದಿಂದ ಹೊರಬಂದು, ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು. ನಗರದ ಕಬ್ಬನ್ ಪಾರ್ಕ್‌ನಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅಬಕಾರಿ ಇಲಾಖೆ ನೌಕರರ ಸಂಘದ ವತಿಯಿಂದ ಆಯೋಜಿಸಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರು ಪುರುಷರ ಸಮಾನವಾಗಿ ಬೆಳೆಯಬೇಕು. ಗೃಹಲಕ್ಷ್ಮೀ ಹಾಗೂ ಶಕ್ತಿ ಯೋಜನೆಗಳ ಮೂಲಕ ಮಹಿಳೆಯರಿಗೆ ಸ್ವಾಭಿಮಾನಿ ಬದುಕು ರೂಪುಗೊಂಡಿದೆ. ಗೃಹಲಕ್ಷ್ಮೀ ಯೋಜನೆಯಡಿ ಸುಮಾರು 1.25 ಕೋಟಿ ಮಹಿಳೆಯರಿಗೆ ಈಗಾಗಲೇ ₹58 ಸಾವಿರ ಕೋಟಿ ನೆರವು ನೀಡಲಾಗಿದೆ ಎಂದು ತಿಳಿಸಿದರು.

ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೇ ವರ್ಷಪೂರ್ತಿ ಆಚರಿಸಬಹುದಾದ ಮಟ್ಟಿಗೆ ಮಹಿಳೆಯರು ಇಂದು ಶಕ್ತರಾಗಿದ್ದಾರೆ. ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಅನೇಕ ನಿರ್ಬಂಧಗಳಿದ್ದರೂ, ಈಗ ಪರಿಸ್ಥಿತಿ ಬದಲಾಗಿದೆ. ಮಹಿಳೆಯರು ಸ್ವಾಭಿಮಾನದಿಂದ ಬದುಕುತ್ತಿರುವುದು ಸಂತೋಷದ ಸಂಗತಿ ಎಂದರು. ಕಿತ್ತೂರು ರಾಣಿ ಚೆನ್ನಮ್ಮ ಅವರ ಹೋರಾಟವನ್ನು ಸ್ಮರಿಸಿದ ಸಚಿವೆ, ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಮಹಿಳೆಯಾಗಿ ಅವರು ಇತಿಹಾಸ ನಿರ್ಮಿಸಿದ್ದಾರೆ ಎಂದು ಹೇಳಿದರು.

ಸಮಾಜದಲ್ಲಿ ಬಡ ಹಾಗೂ ಶ್ರೀಮಂತ ಮಹಿಳೆಯರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲು ಎಲ್ಲರೂ ಪ್ರಯತ್ನಿಸಬೇಕು. ಮಹಿಳೆಯರು ಪರಸ್ಪರ ಪ್ರೇರಣೆಯಾಗಿ ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆಯ ಅಪರ ಆಯುಕ್ತ ಬಸವರಾಜ್ ಸೋಮಣ್ಣನವರ್, ಸಂಘದ ಅಧ್ಯಕ್ಷ ಡಾ. ವೈ. ಮಂಜುನಾಥ್, ಸಾಹಿತಿ ಸುಧಾ ಬರಗೂರು, ಕವಿತಾ ಮಿಶ್ರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.



