ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ. ಭಾದ್ರಪದ ಕೃಷ್ಣ ಪಕ್ಷದಲ್ಲಿ ಬರುವ ಮಹಾಲಯ ಅಮವಾಸ್ಯೆ ನಮ್ಮ ಅಗಲಿದ ಪೂರ್ವಜರ ಆತ್ಮಗಳಿಗೆ ಮೀಸಲಾದ ದಿನ. ಒಬ್ಬ ವ್ಯಕ್ತಿಯು ಈ ನಶ್ವರ ಪ್ರಪಂಚವನ್ನು ತೊರೆದಾಗ, ಅವನ ಆತ್ಮವು ಪಿತೃಗಳ (ಪೂರ್ವಜರ) ಲೋಕಕ್ಕೆ ಏರುತ್ತದೆ. ಆದರೆ ಅವರು ತಮ್ಮ ವಂಶಸ್ಥರ ಜೀವನದ ಮೇಲೆ ಪ್ರಭಾವ ಬೀರುತ್ತಲೇ ಇರುತ್ತಾರೆ. ತಮ್ಮ ಪಿತೃಗಳಿಗೆ ನಿಶ್ಚಿತ ತಿಥಿಯಂದು ತರ್ಪಣ ಮಾಡಲು ಸಾಧ್ಯವಾಗದಿದ್ದರೆ, ಅಂತಹವರು ಮಹಾಲಯ ಅಮವಾಸ್ಯೆಯ ದಿನ ಪಿತೃ ತರ್ಪಣ ನೀಡಬಹುದು. ಮಹಾಲಯ ಅಮವಾಸ್ಯೆ ಪಿತೃ ಪಕ್ಷದ ಕೊನೆಯ ಮತ್ತು ಪ್ರಮುಖ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು, ಪೂರ್ವಜರ ಆಶೀರ್ವಾದ ಪಡೆಯಲು ತರ್ಪಣ ಮತ್ತು ಶ್ರಾದ್ಧವನ್ನು ಮಾಡುವುದು ಬಹಳ ಮ

ಪಿತೃಗಳನ್ನು ಉದ್ದೇಶಿಸಿ ನೀಡಿದ ನೀರಿಗೆ ಪಿತೃತರ್ಪಣ ಎನ್ನುತ್ತಾರೆ. ಪಿತೃತರ್ಪಣಕ್ಕೆ ಎಳ್ಳನ್ನು ತೆಗೆದುಕೊಳ್ಳಬೇಕು. ಎಳ್ಳಿನಲ್ಲಿ ಕಪ್ಪು ಮತ್ತು ಬಿಳಿ ಹೀಗೆ ಎರಡು ಪ್ರಕಾರಗಳಿವೆ. ಶ್ರಾದ್ಧಕ್ಕೆ ಕಪ್ಪು ಎಳ್ಳನ್ನು ಉಪಯೋಗಿಸಬೇಕು. ‘ಎಳ್ಳು ಮಿಶ್ರಿತ ನೀರಿನಿಂದ ಪಿತೃಗಳಿಗೆ ತರ್ಪಣ ಕೊಡುವುದನ್ನು ಎಳ್ಳುತರ್ಪಣ’ ಎನ್ನುತ್ತಾರೆ. ತರ್ಪಣವನ್ನು ಕೊಡುವುದರಿಂದ ಪಿತೃಗಳು ಸಂತುಷ್ಟರಾಗುತ್ತಾರೆ. ಅಲ್ಲದೇ ತರ್ಪಣ ಕೊಟ್ಟವರಿಗೆ ಆಯುಷ್ಯ, ತೇಜಸ್ಸು, ಬ್ರಹ್ಮವರ್ಚಸ್ಸು, ಸಂಪತ್ತು, ಯಶಸ್ಸು ಮತ್ತು ಅನ್ನಾದ್ಯ ಅಂದರೆ ಭಕ್ಷಿಸಿದ ಅನ್ನವನ್ನು ಜೀರ್ಣ ಮಾಡುವ ಶಕ್ತಿಯನ್ನು ಕೊಟ್ಟು ತೃಪ್ತಗೊಳಿಸುತ್ತಾರೆ.

ಭಾದ್ರಪದ ಕೃಷ್ಣ ಪ್ರತಿಪದೆಯಿಂದ ಭಾದ್ರಪದ ಅಮಾವಾಸ್ಯೆ ಈ ಕಾಲಾವಧಿಯಲ್ಲಿ ಪಿತೃಪಕ್ಷವಿದೆ. ಈ ಕಾಲದಲ್ಲಿ ಕುಲದ ಎಲ್ಲ ಪಿತೃಗಳು ಅನ್ನ ಮತ್ತು ಉದಕ (ನೀರು) ಇವುಗಳ ಅಪೇಕ್ಷೆಯಿಂದ ತಮ್ಮ ವಂಶಜರ ಬಳಿಗೆ ಬರುತ್ತಾರೆ. ಪಿತೃಪಕ್ಷದಲ್ಲಿ ಪಿತೃಲೋಕವು ಪೃಥ್ವಿಲೋಕದ ಅತ್ಯಧಿಕ ಸಮೀಪ ಬರುವುದರಿಂದ ಪಿತೃಗಳಿಗೆ ನೀಡಿದ ಅನ್ನ, ಉದಕ (ನೀರು) ಮತ್ತು ಪಿಂಡದಾನ ಅವರವರೆಗೆ ಬೇಗನೆ ತಲುಪುತ್ತದೆ. ಆದುದರಿಂದ ಅವರು ಸಂತುಷ್ಟರಾಗುತ್ತಾರೆ ಮತ್ತು ಕುಟುಂಬದವರಿಗೆ ಆಶೀರ್ವಾದ ನೀಡುತ್ತಾರೆ. ಶ್ರಾದ್ಧದ ವಿಷಯದಲ್ಲಿ ಶ್ರಾದ್ಧದಲ್ಲಿನ ಮಂತ್ರೋಚ್ಚಾರಗಳಲ್ಲಿ ಪಿತೃಗಳಿಗೆ ಗತಿ ನೀಡುವಂತಹ ಸೂಕ್ಷ್ಮಶಕ್ತಿಯು ಒಳಗೊಂಡಿರುತ್ತದೆ; ಅದರಿಂದಾಗಿ ಪಿತೃಗಳಿಗೆ ಗತಿ ಸಿಗಲು ಸಾಧ್ಯವಾಗುತ್ತದೆ. ಶ್ರಾದ್ಧವಿಧಿಯನ್ನು ಮಾಡುವುದರಿಂದ ಪಿತೃದೋಷದಿಂದ ಸಾಧನೆಯಲ್ಲಿ ಬರುವ ಅಡಚಣೆಗಳು ದೂರವಾಗಿ ಸಾಧನೆಗೆ ಸಹಾಯವಾಗುತ್ತದೆ. ‘ಎಲ್ಲ ಪಿತೃಗಳು ತೃಪ್ತರಾಗಬೇಕೆಂದು ಮತ್ತು ಸಾಧನೆಗೆ ಅವರ ಆಶೀರ್ವಾದ ಸಿಗಬೇಕು’ ಎಂಬುದಕ್ಕಾಗಿ ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಅವಶ್ಯ ಮಾಡಬೇಕು.
– (ಸಂಗ್ರಹ) ಸನಾತನ ಸಂಸ್ಥೆಯ ಗ್ರಂಥ ಹಾಗೂ ಇತರ ಮೂಲಗಳಿಂದ, ನಿತ್ಯಾನಂದ ಕಾಮತ್, ಮೂಡುಬಿದಿರೆ