ಉಡುಪಿ : ಉಡುಪಿಯ ಮಲ್ಪೆ ಕಡಲತೀರದಲ್ಲಿ ಕೃಷ್ಣನ ವಿಗ್ರಹ ತೇಲಿ ಬಂದಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾನುವಾರ ಇಸ್ಕಾನ್ ಸಂಸ್ಥೆಯ ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆ ಉಡುಪಿ ಶ್ರೀ ಕೃಷ್ಣ ಮಠದಿಂದ ಸುಮಾರು 18 ಬಸ್ಸುಗಳಲ್ಲಿ ಭಕ್ತರು ಕಡಲತೀರಕ್ಕೆ ತೆರಳಿದ್ದರು.

ಈ ವೇಳೆ ಸಮುದ್ರದಲ್ಲಿ ತೇಲಿ ಬಂದ ವಿಗ್ರಹವೊಂದು ಭಕ್ತರ ಗಮನ ಸೆಳೆದು, ಸಾವಿರಾರು ಮಂದಿ ಅದನ್ನು ಮೇಲಕ್ಕೆ ತೆಗೆದು ಸಂಭ್ರಮಿಸಿದ್ದಾರೆ.

ಉಡುಪಿಯ ಕೃಷ್ಣ ದೇವರು ಸಮುದ್ರದಲ್ಲೇ ಲಭ್ಯವಾದ ಇತಿಹಾಸವನ್ನು ನೆನಪಿಸಿಕೊಂಡ ಭಕ್ತರು ಇದನ್ನು ಪವಾಡವೆಂದು ಭಾವಿಸಿ ವಿಗ್ರಹವನ್ನು ನೋಡಿ ಸಂಭ್ರಮಿಸಿ, ಬೆಂಗಳೂರುಗೆ ತೆಗೆದುಕೊಂಡು ಹೋಗುವದಾಗಿ ಸಂಭ್ರಮಿಸಿದ್ದಾರೆ.

ಆದರೆ ಪ್ರಾಥಮಿಕ ಮಾಹಿತಿ ಪ್ರಕಾರ, ಇದು ಕರಾವಳಿ ಭಾಗದ ದೇಗುಲಗಳ ಪ್ರವೇಶ ದ್ವಾರದಲ್ಲಿ ಇರುವ ಜಯ–ವಿಜಯರ ವಿಗ್ರಹವಾಗಿದ್ದು, ಹಾನಿಗೊಳಗಾದ ವಿಗ್ರಹಗಳನ್ನು ಸಮುದ್ರಕ್ಕೆ ಮುಳುಗಿಸುವ ಪರಂಪರೆಯಂತೆ ಮುಳುಗಿಸಲಾದ ವಿಗ್ರಹವೇ ತೇಲಿ ಬಂದಿದೆ ಎನ್ನಲಾಗಿದೆ.

ಈ ಕುರಿತ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.



