Thursday, March 27, 2025

spot_img

ಮಲ್ಪೆಯ ಘಟನೆ ಉದ್ದೇಶಪೂರ್ವಕಲ್ಲ, ಆಕ್ರೋಶ ಭರಿತ ಪ್ರತಿಕ್ರಿಯೆ : ಕೆ ರಘುಪತಿ ಭಟ್

ಉಡುಪಿ : ಮಲ್ಪೆ ಬಂದರು ಪ್ರದೇಶದಲ್ಲಿ ಮಾ.18ರಂದು ನಡೆದ ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಹಲ್ಲೆಯ ಘಟನೆಗೆ ಸಂಬಂಧಿಸಿದಂತೆ ಅಮಾಯಕರ ಮೇಲೆ ಅಟ್ರಾಸಿಟಿ ಮೊಕದ್ದಮೆ ದಾಖಲಿಸಿ ಬಂಧಿಸಿರುವುದು ಖಂಡನೀಯ. ಮಲ್ಪೆಯ ಘಟನೆ ಉದ್ದೇಶಪೂರ್ವಕಲ್ಲ. ಬೆಳಗ್ಗಿನ ಜಾವ 3 ಗಂಟೆಗೆ ಎದ್ದು ಮೀನುಗಾರರು ಸಮುದ್ರದಲ್ಲಿ ಜೀವದ ಹಂಗು ತೊರೆದು ಮೀನುಗಾರಿಕೆ ನಡೆಸಿ ತಂದ ಮೀನು ಕಳ್ಳತನವಾದಾಗ ಈ ತರದ ಆಕ್ರೋಶದ ಪ್ರತಿಕ್ರಿಯೆಗಳು ಸಾಮಾನ್ಯ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಅಮಾಯಕರ ಮೇಲೆ ಮೊಕದ್ದಮೆ ದಾಖಲಿಸದೆ ಮಲ್ಪೆ ಮೀನುಗಾರರ ಸಂಘವನ್ನು ಮಧ್ಯಸ್ಥಿಕೆ ಮಾಡಿ ಎರಡೂ ಕಡೆಯವರನ್ನು ಕರೆಸಿ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿ ಮೀನುಗಾರರಿಗೆ ರಕ್ಷಣೆ ನೀಡಬೇಕು ಎಂದು ಉಡುಪಿಯ ನಿಕಟ ಪೂರ್ವ ಶಾಸಕರಾದ ಕೆ. ರಘುಪತಿ ಭಟ್ ಅವರು ಒತ್ತಾಯಿಸಿದ್ದಾರೆ.

ಈ ಪ್ರಕರಣದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆದಿರುವುದು ತಪ್ಪು. ಅದನ್ನು ನಾನು ಖಂಡಿಸುತ್ತೇನೆ. ಆದರೆ ಇದನ್ನು ವೈಭವೀಕರಿಸುವುದು ಸರಿಯಲ್ಲ. ಮಲ್ಪೆ ಬಂದರಿನಲ್ಲಿ ನಿರಂತರವಾಗಿ ಮೀನು ಕಳ್ಳತನ ನಡೆಯುತ್ತಿದ್ದರಿಂದ ಕಳ್ಳ ಕೈಗೆ ಸಿಕ್ಕಾಗ ಸಾರ್ವಜನಿಕರು ಆಕ್ರೋಶ ಭರಿತರಾಗಿ ಈ ರೀತಿ ಪ್ರತಿಕ್ರಿಯಿಸಿರಬಹುದು. ಯಾವುದೇ ಊರಿನಲ್ಲಿಯೂ ಕಳ್ಳರು ಕೈಗೆ ಸಿಕ್ಕಾಗ ಯಾರೂ ಗೌರವದಿಂದ ಕಾಣುವುದಿಲ್ಲ. ಈ ಪ್ರಕರಣ ನಡೆದ ಬಳಿಕ ಎರಡೂ ಕಡೆಯವರನ್ನು ಠಾಣೆಗೆ ಕರೆಸಿ ಮೀನುಗಾರ ಮುಖಂಡರ ಸಮಕ್ಷಮದಲ್ಲಿ ರಾಜಿ ಮಾಡಲಾಗಿತ್ತು. ಇಲ್ಲಿ ಎರಡು ಪಾರ್ಟಿಯವರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು. ಹಾಗೂ ಠಾಣಾಧಿಕಾರಿಗಳು ಎರಡೂ ಕಡೆಯವರಿಂದ ತಪ್ಪೊಪ್ಪಿಗೆ ಹಿಂಬರಹ ಬರೆಸಿಕೊಂಡು ಸೌಹಾರ್ದಯುತವಾಗಿ ಪ್ರಕರಣ ಇತ್ಯರ್ಥಗೊಳಿಸಿದ್ದರು.

ಆದರೆ ಈ ಘಟನೆಯ ವಿಡಿಯೋ ಚಿತ್ರೀಕರಣವನ್ನು ವೈಭವೀಕರಿಸಿದ ನಂತರ ಪೊಲೀಸ್ ಇಲಾಖೆ ಅಮಾಯಕ ಮೀನುಗಾರರ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿ ಬಂಧಿಸಿರುವುದು ಸರಿಯಲ್ಲ. ಪ್ರಕರಣದಲ್ಲಿ ಭಾಗಿಯಾಗದವರನ್ನು ಬಂಧಿಸಿರುವುದರಿಂದ ಮೀನುಗಾರರು ಅಭದ್ರತೆಗೆ ಒಳಗಾಗಿದ್ದಾರೆ. ಈ ಘಟನೆ ಉದ್ದೇಶಪೂರ್ವಕವಾಗಿರದೆ ಕ್ಷಣಿಕ ಸಿಟ್ಟಿನಿಂದ ನಡೆದ ಘಟನೆಯಾಗಿದೆ. ಕಳೆದ ಅನೇಕ ವರ್ಷಗಳಿಂದ ಮತ್ಸ್ಯಕ್ಷಾಮದಿಂದ ಮೀನುಗಾರಿಕೆ ಕುಂಠಿತಗೊಂಡು ಮೀನುಗಾರರು ನಷ್ಟ ಅನುಭವಿಸುತ್ತಿದ್ದಾರೆ. ಇದರ ನಡುವೆ ಮಲ್ಪೆ ಬಂದರಿನಲ್ಲಿ ನಿರಂತರವಾಗಿ ಮೀನು ಕಳ್ಳತನ ಹಾಗೂ ಮೀನುಗಾರಿಕಾ ಸಲಕರಣೆಗಳಾದ ಬೋಟಿನ ಪ್ಯಾನ್, ಬ್ಯಾಟರಿ, ಜಿಪಿಎಸ್, ವೈಯರ್ಲೆಸ್, ಫಿಶ್ ಪೈಂಡರ್, ಬಲೆ ಸಾಮಗ್ರಿಗಳು ಕಳ್ಳತನವಾಗುತ್ತಿದ್ದರಿಂದ ಇಲ್ಲಿನ ಜನ ಆಕ್ರೋಶ ಭರಿತರಾಗಿದ್ದರು. ಮಲ್ಪೆ ಬಂದರಿನಲ್ಲಿ ನಡೆಯುತ್ತಿರುವ ಕಳ್ಳತನಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಹಾಗೂ ಮೀನುಗಾರಿಕಾ ಇಲಾಖೆ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಈ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿ ಮೀನುಗಾರರಿಗೆ ರಕ್ಷಣೆ ನೀಡಬೇಕು ಎಂದು ಸರಕಾರವನ್ನು ಹಾಗೂ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles