ಉಡುಪಿ: ಮಲ್ಪೆ ಮತ್ತು ಉಡುಪಿ ಪ್ರದೇಶದಲ್ಲಿ ಅಧಿಕೃತ ಪರವಾನಿಗೆ (ಪರ್ಮಿಟ್) ಪಡೆಯದೇ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ಮಲ್ಪೆ ಪೊಲೀಸರು ನಡೆಸಿದ ದಾಳಿಯಲ್ಲಿ 18 ವಾಹನಗಳನ್ನು ವಶಪಡಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ (ರಿ), ಮಲ್ಪೆ ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ನೀಡಿದ ದೂರಿನ ಅನ್ವಯ ಧಾಳಿ ಮಾಡಲಾಗಿತ್ತು. ಕಳೆದ ಕೆಲವು ದಿನಗಳಿಂದ ಮಲ್ಪೆ–ಉಡುಪಿ ಪ್ರದೇಶದಲ್ಲಿ ಖಾಸಗಿ (ವೈಟ್ ಬೋರ್ಡ್) ಕಾರುಗಳನ್ನು ಪರ್ಮಿಟ್ ಇಲ್ಲದೆ ವಾಣಿಜ್ಯ ಉದ್ದೇಶಕ್ಕಾಗಿ ಬಾಡಿಗೆ ನೀಡಲಾಗುತ್ತಿದೆ ಎಂಬ ಬಗ್ಗೆ ಮಲ್ಪೆ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದರು.

ಈ ದೂರಿನನ್ವಯ ಮಲ್ಪೆ ಪೊಲೀಸ್ ಠಾಣೆಯ ತಂಡವು ತೆಂಕನಿಡಿಯೂರು ಗ್ರಾಮದ ಬೆಳ್ಕಲೆ, ಹಿರಣ್ಯಧಾಮ ಲೇಔಟ್ ಪ್ರದೇಶದಲ್ಲಿ ದಾಳಿ ನಡೆಸಿದೆ. ಪರಿಶೀಲನೆ ವೇಳೆ ಆರ್. ರಶೀದ್ ಎಂಬವರ ಮನೆಯಲ್ಲಿ 18 ವಿಭಿನ್ನ ಮಾದರಿಯ ವೈಟ್ ಬೋರ್ಡ್ ಕಾರುಗಳು ನಿಲ್ಲಿಸಿರುವುದು ಪತ್ತೆಯಾಗಿದೆ. ವಿಚಾರಣೆ ವೇಳೆ, ಆರೋಪಿಯು ಈ ಕಾರುಗಳನ್ನು ಬಾಡಿಗೆಗೆ ನೀಡುತ್ತಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಯಾವುದೇ ಅಧಿಕೃತ ಪರವಾನಿಗೆ ಪತ್ರ ಇಲ್ಲದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ರು ಕಾರುಗಳನ್ನು ಸ್ಥಳದಲ್ಲಿಯೇ ವಶಪಡಿಸಿಕೊಂಡಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಪೊಲೀಸ್ ಇಲಾಖೆಯ ಎಚ್ಚರಿಕೆ
ಮಲ್ಪೆ ಪೊಲೀಸರು ಸಾರ್ವಜನಿಕರಿಗೆ ಹಾಗೂ ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಿದ್ದು ಸಂಬಂಧಪಟ್ಟ ಪ್ರಾಧಿಕಾರದಿಂದ ಅಗತ್ಯ ಪರ್ಮಿಟ್ ಪಡೆದುಕೊಳ್ಳದೇ ಯಾವುದೇ ರೀತಿಯ ವಾಹನ ಬಾಡಿಗೆ ಸೇವೆ ನೀಡುವುದು ಕಾನೂನುಬಾಹಿರ. ಇಂತಹ ಕೃತ್ಯಗಳಲ್ಲಿ ತೊಡಗಿದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
