ಉಡುಪಿ : ಉಡುಪಿ ಜಿಲ್ಲೆಯ ಕೋಟ ಸಮೀಪದ ಶಿರಿಯಾರು ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮನೆಯ ಸಿಟೌಟ್‌ನಲ್ಲಿ ಇಟ್ಟಿದ್ದ ಹಣದ ಬ್ಯಾಗ್ ಕಳ್ಳತನಗೊಂಡ ಘಟನೆ ನಡೆದಿದೆ. ಪಿರ್ಯಾದಿದಾರರಾದ ಬಿ. ರವಿಶಂಕರ್ ಭಟ್ (64) ಶಿರಿಯಾರು ಗ್ರಾಮದ ನಿವಾಸಿಯಾಗಿದ್ದು, ಸ್ಥಳೀಯವಾಗಿ ವಿನಾಯಕ ಸ್ಟೋರ್ ಎಂಬ ದಿನಸಿ ಅಂಗಡಿ ನಡೆಸುತ್ತಿದ್ದರು.

ಅಕ್ಟೋಬರ್ 23ರಂದು ರಾತ್ರಿ 8.30ರ ಸುಮಾರಿಗೆ ಅಂಗಡಿ ಮುಚ್ಚಿ, ದಿನದ ವ್ಯವಹಾರದ ನಗದು ಸುಮಾರು 1,25,000 ರೂಪಾಯಿ ಹಣವನ್ನು ನೀಲಿ ಬಣ್ಣದ ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಮನೆಗೆ ಬಂದಿದ್ದರು. ಮನೆಯ ಸಿಟೌಟ್‌ನಲ್ಲಿ ಬ್ಯಾಗ್ ಇಟ್ಟು ಕಾಲು ತೊಳೆಯಲು ಹೋದ ಭಟ್ ಮರಳಿ ಬಂದಾಗ ಬ್ಯಾಗ್ ಕಾಣೆಯಾಗಿತ್ತು. ಅಲ್ಪಾವಧಿಯಲ್ಲಿ ಅಪರಿಚಿತ ಕಳ್ಳರು ಬ್ಯಾಗ್ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


