ಉಡುಪಿ : ಮಣಿಪಾಲದಲ್ಲಿ ಕುಡಿದ ಮತ್ತಿನಲ್ಲಿ ಅತೀವೇಗವಾಗಿ ಕಾರು ಚಲಾಯಿಸಿ ಸರಣಿ ಅಪಘಾತ ನಡೆಸಿದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಭಿಮನ್ಯು ನೇಗಿ ಎಂದು ಗುರುತಿಸಲಾಗಿದೆ. ಫೆಬ್ರವರಿ 14ರಂದು ತಡರಾತ್ರಿ, ಈತ ಮಣಿಪಾಲದ ಉದಯವಾಣಿ ಪ್ರೆಸ್ ಯುನಿಟ್–4 ಸಮೀಪ ಅತೀವೇಗದಲ್ಲಿ ಕಾರು ಚಲಾಯಿಸಿಕೊಂಡು ಬಂದು, ರಸ್ತೆ ಬದಿಯಲ್ಲಿ ಸಾಲಾಗಿ ನಿಲ್ಲಿಸಿದ್ದ ಏಳು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಭಾರಿ ಹಾನಿ ಉಂಟುಮಾಡಿದ್ದಾನೆ. ಇದೇ ವೇಳೆ ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ, 76 ವರ್ಷದ ಬಡಗಬೆಟ್ಟು ನಿವಾಸಿ ಶಿವಪ್ರಸಾದ್ ಅವರು ಗಾಯಗೊಂಡಿದ್ದು, ತಲೆಯ ಒಳಭಾಗಕ್ಕೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಷನ್ ರಸ್ತೆಯ ಬಳಿಯಿಂದಲೇ ಅತೀವೇಗದಲ್ಲಿ ಯದ್ವಾತದ್ವವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಯುನಿಟ್–4 ಬಳಿ ಬಂದಾಗ ನಿಯಂತ್ರಣ ತಪ್ಪಿದ ಕಾರು ರಸ್ತೆ ತೀರ ಎಡ ಹಾಗೂ ಬಲ ಭಾಗಕ್ಕೆ ಅಡ್ಡಾಡಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಇದೇ ವೇಗದಲ್ಲಿ ಹೆದ್ದಾರಿಗೆ ಪ್ರವೇಶಿಸಿದ್ದರೆ ಇನ್ನಷ್ಟು ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಹರಿಯಾಣ ನೋಂದಣಿಯ ಕಾರಿನಲ್ಲಿ ಈ ಅಪಘಾತ ಸಂಭವಿಸಿದ್ದು, ಯುನಿಟ್–4 ಸಂಸ್ಥೆಯ ಉದ್ಯೋಗಿಗಳು ರಸ್ತೆಯ ಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಹಾನಿಗೀಡಾಗಿವೆ. ಘಟನೆಗೆ ಸಂಬಂಧಿಸಿ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಈ ಪ್ರದೇಶದಲ್ಲಿ ಹಗಲು-ರಾತ್ರಿ ಸಾರ್ವಜನಿಕರು ಹಾಗೂ ಉದ್ಯೋಗಿಗಳು ನಿರಂತರ ಸಂಚರಿಸುತ್ತಿದ್ದು, ಕೆಲ ವಾಹನ ಚಾಲಕರು ಅತೀವೇಗವಾಗಿ ವಾಹನ ಚಲಾಯಿಸುವುದರಿಂದ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಪೊಲೀಸರು ವೇಗ ನಿಯಂತ್ರಣ ಮತ್ತು ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಲಾಗಿದೆ.



