ಬ್ರಹ್ಮಾವರ : ಯುವತಿಯ ಮನೆಯವರು ಮದುವೆಗೆ ನಿರಾಕರಿಸಿದ ಬಳಿಕ ಆಕೆ ಪೋನ್ ಬ್ಲಾಕ್ ಮಾಡಿ ಅಂತರ ಕಾಯ್ದುಕೊಂಡಿದ್ದಾಳೆ ಎಂದು ಯುವತಿಯ ಹುಟ್ಟಿದ ದಿನದಂದೇ ಪ್ರೇಮಿ ಯುವಕ ಚಾಕುವಿನಿಂದ ಇರಿದು, ಬಳಿಕ ತಾನು ಅಕೆಯ ಮನೆಯ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಕೊಕ್ಕರ್ಣೆಯಲ್ಲಿ ನಡೆದಿದೆ. ರಕ್ಷಿತಾ ಪೂಜಾರಿ (24) ಚಾಕು ಇರಿತಕ್ಕೆ ಒಳಗಾದ ಯುವತಿ. ಕಾರ್ತಿಕ್ ಚಾಕುವಿನಿಂದ ಇರಿದು ಆಕೆಯ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಾತ.

ಬ್ರಹ್ಮಾವರ ತಾಲೂಕು ಕೊಕ್ಕರ್ಣೆ ಬಳಿ ಈ ಘಟನೆ ನಡೆದಿದೆ. ರಕ್ಷಿತಾಳ ದೂರದ ಸಂಬಂದಿಯಾದ ಆರೋಪಿ ಕಾರ್ತಿಕ್ ಈಕೆಯನ್ನು ಬಹಳ ಹಿಂದಿನಿಂದಲೂ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಮದುವೆ ಆಗುವಂತೆ ಒತ್ತಾಯಿಸುತ್ತಿದ್ದ ಯುವಕನನ್ನು, ಯುವತಿ ಮನೆಯವರು ನಿರಾಕರಿಸಿದ್ದರು. ಇದೇ ವಿಚಾರವಾಗಿ ಜಗಳವಾಗುತ್ತಿತ್ತು ಎನ್ನಲಾಗಿದೆ.

ಸೆಪ್ಟೆಂಬರ್ 12ರ ಮುಂಜಾನೆ ಕೊಲೆ ಮಾಡುವ ಉದ್ದೇಶದಿಂದ ಪೆಜಮಂಗೂರು ಗ್ರಾಮದ ಪುತ್ತನಕಟ್ಟೆ ಬಳಿ ಇರುವ ಸಾಸ್ತಾವು ರಸ್ತೆಯಲ್ಲಿ ಮನೆಯಿಂದ ಕೆಲಸಕ್ಕೆಂದು ತನ್ನ ತಂಗಿ ಶ್ರಾವಣಿಯ ಜೊತೆ ರಕ್ಷಿತಾ ನಡೆದುಕೊಂಡು ಬರುತ್ತಿದ್ದಾಗ ಮೋಟಾರ್ ಸೈಕಲಿನಲ್ಲಿ ಬಂದು ಚೂರಿಯಿಂದ ರಕ್ಷಿತಾಳ ಹೊಟ್ಟೆಗೆ ಇರಿದು, ಕುತ್ತಿಗೆಗೂ ಇರಿದು, ಜೊತೆಗೆ ಇದ್ದ ರಕ್ಷಿತಾಳ ತಂಗಿ ಶ್ರಾವಣಿಗೆ ಹೊಡೆದು, ಆಕೆಗೂ ಅಲ್ಲಿಂದ ಹೋಗುವಂತೆ ಜೀವ ಬೆದರಿಕೆ ಹಾಕಿ, ಮೋಟಾರ್ ಸೈಕಲ್ ಅನ್ನು ಅಲ್ಲಿಯೇ ಬಿಟ್ಟು ಓಡಿ ಪರಾರಿಯಾಗಿದ್ದಾನೆ.

ಕುತ್ತಿಗೆ ಮತ್ತು ಎಡ, ಬಲ ಪಕ್ಕೆಗೆ ಚಾಕು ಇರಿದ ಹಿನ್ನಲೆಯಲ್ಲಿ ಯುವತಿ ಗಂಭಿರವಾಗಿ ಗಾಯಗೊಂಡು ಕುಸಿದು ಬಿದ್ದಿದ್ದಾಳೆ. ತಕ್ಷಣ ಸ್ಥಳೀಯರು ಯುವತಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ರಕ್ಷಿತಾ ಜೀವ ಉಳಿಸುವ ಯತ್ನ ನಡೆಸಿದ್ದು, ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿ ಕಾರ್ತಿಕ ವಿರುದ್ಧ ಕ್ರಮಕ್ಕೆ6 ಪೊಲೀಸ್ ರು ಮುಂದಾಗಿದ್ದು, ಕೊಲೆ ಮಾಡಿದ ಬಳಿಕ ಆರೋಪಿ ನಾಪತ್ತೆಯಾಗಿದ್ದಾನೆ ಎಂದು ಶಂಕಿಸಲಾಗಿತ್ತು. ಆದರೆ ಕೊಲೆ ಮಾಡಿದ ಆರೋಪಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶವ ಬಾವಿಯಲ್ಲಿ ಪತ್ತೆಯಾಗಿದೆ.

ರಕ್ಷಿತಾ ಳಿಗೆ ಚಾಕುವಿನಿಂದ ಇರಿದ ಬಳಿಕ ಅಲ್ಲಿಂದ ಪರಾರಿಯಾದಾತ ಕಾಡಿನಲ್ಲಿ ಮರೆಯಾಗಿದ್ದಾನೆ, ಇದೇ ಸಂದರ್ಭ ರಕ್ಷಿತಾ ಮನೆಯವರು ಮನೆಯಿಂದ ಹೊರಗೆ ಬಂದಿದ್ದ ಸಂದರ್ಭ ನೋಡಿ ಕಾಲಿಗೆ ಹಗ್ಗದ ಮೂಲಕ ಕಲ್ಲು ಕಟ್ಟಿಕೊಂಡು ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರ್ತಿಕ್ ಗೆ ಈಜಲು ಬರುತ್ತಿದ್ದ ಕಾರಣ ಯಾವುದೇ ಕಾರಣಕ್ಕೂ ತಾನು ಬದುಕಲೇ ಬಾರದು ಎನ್ನುವ ಹಿನ್ನಲೆಯಲ್ಲಿ ಹೀಗೆ ಆತ್ಮಹತ್ಯೆಯ ಮೂಲಕ ತನ್ನ ಜೀವನ ಅಂತ್ಯವಾಗಿಸಿಕೊಂಡಿದ್ದಾನೆ.