ಉಡುಪಿ : ಮಣಿಪಾಲದ ಫ್ಲಾಟ್ ಒಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇರ್ವರನ್ನು ಮಣಿಪಾಲ ಪೊಲೀಸ್ ರು ಬಂಧಿಸಿದ್ದಾರೆ. ಆರ್ಯನ್ ಸಿ ತಾದನಿ, ಆರ್ಯನ್ ಚಗಪ್ಪ ಎನ್ನುವವರನ್ನು ಮಣಿಪಾಲ ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ.

ಮಣಿಪಾಲದ ರಾಯಲ್ ಎಂಬೆಸಿ ಅಪಾರ್ಟ್ ಮೆಂಟಿನ 17 ನೇ ಮಹಡಿಯ ಫ್ಲಾಟ್ ನಂಬ್ರ ಸಿ 1702 ನೇ ಫ್ಲಾಟ್ ನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಪೊಲೀಸ್ ರಿಗೆ ಮಾಹಿತಿ ದೊರಕಿದ ಹಿನ್ನಲೆಯಲ್ಲಿ ಧಾಳಿ ಮಾಡಿ, ಆರೋಪಿ ಆರ್ಯನ್ ಸಿ ತಾದಾನಿಯನ್ನು ವಶಕ್ಕೆ ಪಡೆಯಲಾಯಿತು. ಆರೋಪಿ ಬಳಿಯಲ್ಲಿದ್ದ 60,000 ರೂಪಾಯಿ ಮೌಲ್ಯದ 2105 ಗ್ರಾಂ ಗಾಂಜಾ, ಹುಕ್ಕಾ, ಡಿಜಿಟಲ್ ಸ್ಕೇಲ್ ಹಾಗೂ ಮೊಬೈಲ್ ವಶಕ್ಕೆ ಪಡೆದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ಇನ್ನೊರ್ವ ಆರೋಪಿ ಆರ್ಯನ್ ಚಗಪ್ಪನನ್ನು ಎಂಬಾತನನ್ನು ಮಂಗಳೂರಿನಲ್ಲಿ ವಶಕ್ಕೆ ಪಡೆದು, ಆತನ ಸ್ಕೂಟಿ ಪರಿಶೀಲಿಸಿದಾಗ 20,000 ರೂ ಮೌಲ್ಯದ 627 ಗ್ರಾಂ ಗಾಂಜಾ ಪತ್ತೆಯಾಗಿತ್ತು, ಈ ಹಿನ್ನಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಆರೋಪಿ ಬಳಿಯಲ್ಲಿದ್ದ ಗಾಂಜಾವನ್ನು ಪೊಲೀಸ್ ರು ಸ್ವಾಧೀನಕ್ಕೆ ಪಡೆದಿದ್ದಾರೆ.

ಈ ಇಬ್ಬರು ಆರೋಪಿಗಳು ಮಾದಕವಸ್ತು ಸೇವನೆಯ ವ್ಯಸನಿಗಳಾಗಿದ್ದು ಅವರು ಮಣಿಪಾಲದ ಪ್ರತಿಷ್ಟಿತ ಕಾಲೇಜಿನ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ವಿದ್ಯಾರ್ಥಿಗಳಾಗಿದ್ದಾರೆ. ಇವರು ಮಾದಕವಸ್ತುಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.