ಉಡುಪಿ : ಉಡುಪಿಯ ಖ್ಯಾತ ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ಸಂಸ್ಥೆಗೆ ಕೋಟ್ಯಂತರ ರೂ.ಗಳ ಆನ್ಲೈನ್ ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ ಟೆಕ್ನಾಲಜಿ ಲಿಮಿಟೆಡ್ ಸಂಸ್ಥೆಯು ಇಕ್ವಿಫ್ಲೆಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯೊಂದಿಗೆ ಲೀಸ್ ಒಪ್ಪಂದ ಮಾಡಿಕೊಂಡು, ಅವರ ಮಿಷಿನರಿ ಉಪಕರಣಗಳನ್ನು ಬಳಸುತ್ತ ಬಂದಿದೆ. ಲೀಸ್ ಮೊತ್ತವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪಾವತಿಸುವ ಪದ್ಧತಿ ಜಾರಿಯಲ್ಲಿತ್ತು. ಈಗಾಗಲೇ ನಾಲ್ಕು ಪಾವತಿಗಳು ನಡೆದಿದ್ದು, ಐದನೇ ಕಂತಿನ 1,04,16,229 ರೂಪಾಯಿ ಹಣವನ್ನು ಅಕ್ಟೋಬರ್ 15ರಂದು ಪಾವತಿಸಬೇಕಾಗಿತ್ತು. ಅಕ್ಟೋಬರ್ 11ರಂದು ಸಂಸ್ಥೆಯ ಇಮೇಲ್ ಐಡಿಗೆ ಇಕ್ವಿಫ್ಲೆಕ್ಸ್ ಸಂಸ್ಥೆಯ ಹೆಸರಿನಲ್ಲಿ ಬಂದ ಇಮೇಲ್ ನಲ್ಲಿ ನಿಗದಿತ ದಿನಾಂಕಕ್ಕೆ ಹಣ ಪಾವತಿಸಲು ಸೂಚಿಸಲಾಗಿತ್ತು. ಆದರೆ ಅ.13ರಂದು ಬಂದ ಮತ್ತೊಂದು ಇಮೇಲ್ ನಲ್ಲಿ ನಮ್ಮ ಬ್ಯಾಂಕ್ ಖಾತೆ ಬದಲಾಗಿದೆ, ಹೊಸ ಖಾತೆಗೆ ಹಣ ವರ್ಗಾಯಿಸಿ ಎಂದು ತಿಳಿಸಲಾಗಿತ್ತು.

ಅದರಂತೆ ಮಣಿಪಾಲ ಟೆಕ್ನಾಲಜಿ ಸಂಸ್ಥೆಯು ಅ.15ರಂದು ಸೂಚಿಸಿದ ಖಾತೆಗೆ ಮೊತ್ತವನ್ನು ವರ್ಗಾಯಿಸಿತು. ಆದರೆ ಅ.29ರಂದು ಇಕ್ವಿಫ್ಲೆಕ್ಸ್ ಸಂಸ್ಥೆಯವರು ಹಣ ತಮಗೆ ತಲುಪಿಲ್ಲ ಎಂದು ತಿಳಿಸಿದಾಗ ವಂಚನೆ ನಡೆದಿದೆ ಎಂಬುದು ಬಹಿರಂಗವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅಪರಿಚಿತರು ಇಕ್ವಿಫ್ಲೆಕ್ಸ್ ಸಂಸ್ಥೆಯ ಹೆಸರಿನಲ್ಲಿ ನಕಲಿ ಇಮೇಲ್ ಐಡಿ ಸೃಷ್ಟಿಸಿ, ಕಂಪೆನಿಯನ್ನು ಸಂಪರ್ಕಿಸಿ ಹಣ ವಸೂಲಿ ಮಾಡಿರುವುದು ಪತ್ತೆಯಾಗಿದೆ.

ಈ ಸಂಬಂಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಟಿ ಕಾಯ್ದೆಯ ಕಲಂ 66(C) ಸೇರಿದಂತೆ ಸಂಬಂಧಿತ ವಿಧಿಗಳಡಿ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


