ಉಡುಪಿ: ಮಣಿಪಾಲದ ಈಶ್ವರನಗರ ಪ್ರದೇಶದಲ್ಲಿ ಹುಚ್ಚು ಹಿಡಿದ ನಾಯಿ ಧಾಳಿ ನಡೆಸಿ ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ಗಾಯಗಳಾದ ಘಟನೆ ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯರ ಪ್ರಕಾರ, ಈಶ್ವರ ನಗರದಲ್ಲಿನ ಸಭಾಭವನದ ಬಳಿ ಬೀದಿ ನಾಯಿಗಳಿಗೆ ಕೆಲವರು ದಿನನಿತ್ಯ ಬಿಸ್ಕೆಟ್ ನೀಡಿ ಸಾಕು ನಾಯಿಗಳಂತೆ ಬೆಳೆಸುತ್ತಿದ್ದರೆಂದು ತಿಳಿದು ಬಂದಿದೆ. ಅದೇ ಗುಂಪಿನ ನಾಯಿಗಳಲ್ಲಿ ಒಂದು ನಾಯಿ ಇದೀಗ ಹುಚ್ಚುಹಿಡಿದ ಸ್ಥಿತಿಯಲ್ಲಿ ದಾರಿ ಹೋಕರಿಗೂ, ವಿದ್ಯಾರ್ಥಿಗಳಿಗೂ ಕಚ್ಚಿ ಪರಾರಿಯಾಗುತ್ತಿದೆ.

ಈ ಧಾಳಿಯಲ್ಲಿ ವಿದ್ಯಾರ್ಥಿಗಳಾದ ಸಾನ್ವಿತ್ (ಪಿಯುಸಿ-I), ಶುತ್ರತ್ ಶೆಟ್ಟಿ (9ನೇ ತರಗತಿ) ಮತ್ತು ಸ್ಥಳೀಯ ಉರಗಪ್ರೇಮಿ ಪ್ರಾಣೇಶ್ ಗಾಯಗೊಂಡಿದ್ದಾರೆ. ಇದೇ ನಾಯಿ ಪ್ರದೇಶದ ಕೆಲವು ಪಶುಗಳಿಗೂ ಕಚ್ಚಿರುವುದಾಗಿ ಮಾಹಿತಿ ದೊರೆತಿದೆ. ಹುಚ್ಚುನಾಯಿ ಕಚ್ಚಿದ ವಿದ್ಯಾರ್ಥಿಗಳು ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಹಾಗೂ ಉಡುಪಿ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಘಟನೆಯಿಂದ ಸ್ಥಳೀಯರು ಹಾಗೂ ಅನ್ಯ ರಾಜ್ಯದ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಉಂಟಾಗಿದೆ. ಘಟನೆಯ ಬಳಿಕ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಸಾರ್ವಜನಿಕರು ನಗರಸಭೆಯ ನಿರ್ಲಕ್ಷ್ಯವನ್ನೂ ಟೀಕಿಸಿದ್ದಾರೆ. ಬೀದಿ ನಾಯಿಗಳಿಗೆ ಆಹಾರ ನೀಡುವ ಪದ್ಧತಿಯಿಂದ ಅವುಗಳು ಸಾಕು ನಾಯಿಗಳಂತೆ ವರ್ತಿಸಿ ನಂತರ ಸಾರ್ವಜನಿಕರ ಮೇಲೆ ಧಾಳಿ ಮಾಡುವ ಘಟನೆಗಳು ಹೆಚ್ಚುತ್ತಿವೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಸ್ಥಳೀಯ ನಾಗರಿಕರು ಹಾಗೂ ಪೋಷಕರು ಉಡುಪಿ ನಗರಸಭೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಈಶ್ವರನಗರದಲ್ಲಿ ಹುಚ್ಚು ಹಿಡಿದ ನಾಯಿಗಳನ್ನು ತಕ್ಷಣ ಹಿಡಿದು ಸೂಕ್ತ ವೈದ್ಯಕೀಯ ನಿರ್ವಹಣೆ ಮಾಡುವಂತೆ ಹಾಗೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಶಾಶ್ವತ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿದ್ದಾರೆ.