ಮಣಿಪಾಲದ ಮಾಹೆ ವಿಶ್ವವಿದ್ಯಾಲಯ ನಡೆಸಿಕೊಂಡು ಬರುತ್ತಿರುವ ದೇಶದ ಪ್ರತಿಷ್ಠಿತ ಮಣಿಪಾಲ್ ಮ್ಯಾರಥಾನ್ ಏಳನೇ ಆವೃತ್ತಿ ಇಂದು ನಡೆಯಿತು. ಭಾರತ ಸೇರಿದಂತೆ ಅನೇಕ ದೇಶಗಳ ಕ್ರೀಡಾಪಟುಗಳು ಈ ಮ್ಯಾರಥಾನ್ ನಲ್ಲಿ ಭಾಗಿಯಾದರು. 42kmಗಳ ಫುಲ್ ಮ್ಯಾರಥಾನ್ ಸಹಿತ ವಿವಿಧ ಹಂತಗಳಲ್ಲಿ ಸ್ಪರ್ಧಾಕೂಟ ನಡೆಯಿತು.

ದೇಶದಲ್ಲೇ ಪ್ರತಿಷ್ಠಿತ ಎನಿಸಿರುವ ಮಣಿಪಾಲ್ ಮೆರಾಥಾನ್ ಇಂದು ಮುಂಜಾನೆ ಆರಂಭಗೊಂಡಿತು. ಸುಮಾರು 17,000ಕ್ಕೂ ಅಧಿಕ ಮಂದಿ ಓಟಗಾರರು ದೇಶವಿದೇಶಗಳಿಂದ ಈ ಮ್ಯಾರಥಾನ್ ನಲ್ಲಿ ಭಾಗಿಯಾದರು. ಆರೋಗ್ಯ ಮತ್ತು ಸದೃಢತೆಗಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಎಂಬ ಘೋಷ ವಾಕ್ಯದೊಂದಿಗೆ ಮ್ಯಾರಾಥಾನ್ ನಡೆಯಿತು ದೇಹದ ಯೋಗ ಕ್ಷೇಮ ಮತ್ತು ಸದೃಢತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕೂಟವನ್ನು ಆಯೋಜಿಸಲಾಗಿತ್ತು. ಮ್ಯಾರಥಾನ್ ನ ಈ ಆವೃತ್ತಿಯಲ್ಲಿ ಯುಎಸ್ಎ, ಫ್ರಾನ್ಸ್ ,ಜರ್ಮನಿ ,ಇಂಗ್ಲೆಂಡ್, ಸೂಡಾನ್ ,ಅಬುದಾಬಿ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಭಾಗವಹಿಸಿದ್ದರು.
42km ನ್ನ ಪೂರ್ಣ ಮ್ಯಾರಥಾನ್, 21 ಕಿಲೋಮೀಟರ್ ನ ಹಾಫ್ ಮ್ಯಾರಥಾನ್ ಹತ್ತು ಕಿಲೋಮೀಟರ್ 5 ಕಿಲೋಮೀಟರ್ ಓಟವನ್ನು ಹವ್ಯಾಸಿ ಓಟಗಾರರಿಗಾಗಿ ಆಯೋಜಿಸಲಾಗಿತ್ತು. ಆರಂಭಿಕ ಓಟಗಾರರಿಗೆ 3 ಕಿಲೋಮಿಟರ್ ಓಟ ಸೇರಿದಂತೆ ಹಲವು ವಿಶೇಷತೆಗಳನ್ನು ಸ್ಪರ್ಧಾಕೂಟ ಒಳಗೊಂಡಿತ್ತು.ಇದೇ ವೇಳೆ ಸಮರ್ಥಂ ಟ್ರಸ್ಟ್ ನಿಂದ 300ಕ್ಕೂ ಹೆಚ್ಚು ದೃಷ್ಟಿ ಹೀನರು ಹಾಗೂ ಕರ್ನಾಟಕದ ವಿವಿಧ ಭಾಗಗಳ ವಿಶೇಷ ಚೇತನ ಮಕ್ಕಳು ಭಾಗವಹಿಸಿ ಗಮನ ಸೆಳೆದರು. ದೈಹಿಕ ನ್ಯೂನತೆಯ ಹೊರತಾಗಿಯೂ ವೀಲ್ ಚೇರ್ ನಲ್ಲಿ ಮ್ಯಾರಥಾನ್ ಓಡಿ ಅನೇಕ ಮಂದಿ ಕ್ರೀಡಾ ಮನೋಭಾವ ಮೆರೆದರು.

ಉಡುಪಿ ಜಿಲ್ಲಾಧಿಕಾರಿ ಡಾ ವಿದ್ಯಾಕುಮಾರಿ, ಶಾಸಕ ಯಶ್ಪಾಲ್ ಸುವರ್ಣ ಸೇರಿದಂತೆ ಜಿಲ್ಲಾಡಳಿತ, ನಗರ ಆಡಳಿತದ ಪ್ರಮುಖರು ಹಾಗೂ ಮಾಹೆ ವಿಶ್ವವಿದ್ಯಾಲಯದ ಗಣ್ಯರು ಮ್ಯಾರಥಾನ್ ಗೆ ಚಾಲನೆ ನೀಡಿದರು

ಮಣಿಪಾಲ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗಿಯಾದರು. ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಫಿಟ್ನೆಸ್ ಚಟುವಟಿಕೆಗಳು ಕೂಟಕ್ಕೆ ಹೊಸ ಕಳೆ ನೀಡಿದವು. ಮುಂಜಾನೆ 5:00 ಗಂಟೆಗೆ ಆರಂಭವಾದ ಓಟ ಮಧ್ಯಾಹ್ನದವರೆಗೂ ನಡೆಯಿತು
ಉಡುಪಿ ನಗರದ ಪ್ರಮುಖ ರಸ್ತೆಗಳು ಮಾತ್ರವಲ್ಲದೆ, ಕಡಲ ತೀರ, ಗ್ರಾಮೀಣ ರಸ್ತೆಗಳು ಸೇರಿದಂತೆ ಒಟ್ಟು 42 ಕಿಲೋಮೀಟರ್ ವ್ಯವಸ್ಥಿತ ಓಟಕ್ಕೆ ಅವಕಾಶ ನೀಡಲಾಗಿತ್ತು. ಮಾರ್ಗದುದ್ದಕ್ಕೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆಗಳು ನಡೆದವು.