ಉಡುಪಿ : ಉಡುಪಿಯ ಮಣಿಪಾಲದ ಹೆಸರಾಂತ ಪಬ್ “ಡೌನ್ ಟೌನ್” ನಲ್ಲಿ ಬಾನುವಾರ ತಡರಾತ್ರಿ ಮಾರಾಮಾರಿ ನಡೆದಿದ್ದು, ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಬ್ ಒಳಗೆ ಯುವಕರಿಬ್ಬರ ನಡುವೆ ನಡೆದ ಹೊಡೆದಾಟ ತೀವ್ರ ಸ್ವರೂಪ ಪಡೆದಿದ್ದು, ರಸ್ತೆ ಬಳಿ ಒರ್ವ ಯುವಕನಿಗೆ ರಕ್ತ ಬರುವಂತೆ ಥಳಿಸಿರುವ ದೃಶ್ಯಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ಈ ಕುರಿತು ಸದ್ಯ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ ಮೊದಲಿನಿಂದಲೂ ಗುಣಮಟ್ಟದ ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಗೆ ಪ್ರಖ್ಯಾತಿ ಎನ್ನಬಹುದು. ಇಲ್ಲಿನ ಗುಣಮಟ್ಟದ ಶಿಕ್ಷಣ ಪಡೆಯಲು ರಾಜ್ಯ ಅಂತರಾಜ್ಯ ವಿದೇಶದಿಂದಲೂ ವಿದ್ಯಾರ್ಥಿಗಳು ಬರುತ್ತಾರೆ, ಇನ್ನು ವೈದ್ಯಕೀಯ ಸೇವೆಗೆ ಮಣಿಪಾಲ ಎತ್ತದ ಕೈ, ಇಂತಹ ಮಣಿಪಾಲ ಇತ್ತೀಚಿನ ದಿನಗಳಲ್ಲಿ ಪಬ್ ಸಂಸ್ಕೃತಿಯ ಮೂಲಕ ಅಪಖ್ಯಾತಿಗೆ ಪಾತ್ರವಾಗಿದೆ ಎನ್ನುವುದು ಸ್ಥಳಿಯರ ಆರೋಪ. ಸದ್ಯ ಮಣಿಪಾಲದ ಹೆಸರಾಂತ ಪಬ್ ನಲ್ಲಿ ನಡೆದ ಗಲಾಟೆ ಈ ಆರೋಪಕ್ಕೆ ಸಾಕ್ಷಿ ನೀಡುತ್ತಿದೆ ಎನ್ನಲಾಗಿದೆ

ಹಿಂದಿನ ದಿನಗಳಲ್ಲಿ ಉಡುಪಿ ಜಿಲ್ಲಾ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದ ಅರುಣ್ ಕುಮಾರ್ ಅವರು ಮಣಿಪಾಲದ ಪಬ್ ಸಂಸ್ಕೃತಿಗೆ ನಿಯಂತ್ರಣ ತರಲು ಕ್ರಮ ಕೈಗೊಂಡಿದ್ದರು. ಅದರಂತೆ, ಆ ವೇಳೆಯ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರು ವೀಕೆಂಡ್ ಡ್ರೈವ್‌ಗಳು ನಡೆಸಿ ಎಚ್ಚರಿಕೆ ನೀಡುತ್ತಿದ್ದರು ಹಾಗೂ ಸಮಯ ಮೀರಿ ಕಾರ್ಯನಿರ್ವಹಿಸುತ್ತಿದ್ದ ಅಥವಾ ಅನುಮತಿ ಇಲ್ಲದೆ ನಡೆಯುತ್ತಿದ್ದ ಪಬ್‌ಗಳಿಗೆ ಬೀಗ ಹಾಕಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಮಣಿಪಾಲದಲ್ಲಿ ಪಬ್ ಕಲ್ಚರ್ ಪುನಃ ಚುರುಕುಗೊಂಡಿದೆ ಎಂಬ ದೂರುಗಳು ನಾಗರಿಕರಿಂದ ಕೇಳಿ ಬರುತ್ತಿದ್ದವು. ಇದೀಗ ವೈರಲ್ ಆಗಿರುವ ಈ ಗಲಾಟೆ ವಿಡಿಯೋ ಆ ಆರೋಪಗಳಿಗೆ ಮತ್ತಷ್ಟು ಬಲ ತುಂಬಿದೆ. ಸ್ಥಳೀಯರು, ಮಣಿಪಾಲ ಶಿಕ್ಷಣ ಕೇಂದ್ರವಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಪಬ್‌ಗಳಲ್ಲಿ ನಿಯಮ ಪಾಲನೆ ಕಡ್ಡಾಯವಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ.



