ಉಡುಪಿ: ಮಣಿಪಾಲದಲ್ಲಿ ನಡೆದ ಅಪಹರಣ ಪ್ರಕರಣವನ್ನು ಪೊಲೀಸರು ಭೇದಿಸಿ, ತೆಲಂಗಾಣ ರಾಜ್ಯದಲ್ಲಿ ಆರೋಪಿಗಳನ್ನು ಬಂಧಿಸಿ ಅಪಹರಣಕ್ಕೊಳಗಾದ ವ್ಯಕ್ತಿಯನ್ನು ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ತೆಲಂಗಾಣ ತಾಂಡ್ಯ ರಮಾನಾಥ ಶ್ರೀನು (30),ಪಡಮಡಿ ತಾಂಡ್ಯದ ಮೋಹನ್ ರಮವಾತ್ (22), ದೇವರಕೊಂಡ ಚಿಂತಾಲ್ ತಾಂಡಾದ ಪರಮೇಶ್ (30), ಚಿಂತಾಲ್ ತಾಂಡಾದ ಪಾಲ್ತ್ಯ ವಿಜಯ್ (25) ಬಂಧಿತರು.

ಮಾರ್ಚ್ 31ರಂದು ರಾತ್ರಿ 8:15ರ ಸುಮಾರಿಗೆ ರಾಮ ಮಡಿವಾಳ ಅವರು ತಮ್ಮ ತಮ್ಮ ಲಕ್ಷ್ಮಣರಿಗೆ ಚಿಕಿತ್ಸೆ ನೀಡಲು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಬಳಿಕ ಆಸ್ಪತ್ರೆ ಹೊರಭಾಗದ ಕ್ಯಾಂಟೀನ್ನಲ್ಲಿ ಪಿರ್ಯಾದಿದಾರರು ಹಾಗೂ ಅವರ ಅಣ್ಣ ರಾಜೇಶ್ ಮತ್ತು ಸುಧೀರ್ ಟೀ ಕುಡಿಯುತ್ತಿದ್ದ ವೇಳೆ, ಮಧ್ಯಾಹ್ನ ಸುಮಾರು 12:15ರ ವೇಳೆಗೆ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಕಾರಿನಲ್ಲಿ ಬಂದ ಏಳು-ಎಂಟು ಮಂದಿ ಏಕಾಏಕಿ ರಾಜೇಶ್ ಅವರನ್ನು ಹಿಡಿದು ಬಲವಂತವಾಗಿ ಕಾರಿನಲ್ಲಿ ಕೂರಿಸಿ ಹಿರಿಯಡ್ಕ ಕಡೆಗೆ ಅಪಹರಿಸಿಕೊಂಡು ಹೋಗಿದ್ದರು.ಆರೋಪಿಗಳು ರಾಜೇಶ್ ಅವರೊಂದಿಗೆ ಹಿಂದಿನಿಂದಲೂ ವ್ಯವಹಾರ ಸಂಬಂಧ ಹೊಂದಿದ್ದವರು ಎನ್ನಲಾಗಿದ್ದು, ಮಲ್ಲಾರೆಡ್ಡಿ, ತುಳಜಾ, ನರಸಿಂಗ, ಹುಸೇನ್, ಶಂಕರ, ನಾಗೇಶ್, ಪರಮೇಶ್ವರ್ ಮತ್ತು ವಿಜಯ್ ಎಂಬವರನ್ನು ಗುರುತಿಸಲಾಗಿತ್ತು. ವ್ಯವಹಾರ ಸಂಬಂಧಿತ ವೈಷಮ್ಯದ ಹಿನ್ನೆಲೆ ಅಪಹರಣ ನಡೆದಿರುವ ಶಂಕೆ ವ್ಯಕ್ತವಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಮಣಿಪಾಲ ಪೊಲೀಸ್ ರು ಕಾರ್ಯಾಚರಣೆ ನಡೆಸಿ, ತೆಲಂಗಾಣ ರಾಜ್ಯದ ಕರೀಂನಗರ ಜಿಲ್ಲೆಯ ಗೋವಿಂದಪಳ್ಳಿ ಪ್ರದೇಶದ ಸಿಲ್ವರ್ ಸ್ಕೈ ಲಾಡ್ಜ್ನಲ್ಲಿ ಏಪ್ರಿಲ್ 9ರಂದು ಮುಂಜಾನೆ 3:30ರ ಸುಮಾರಿಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ವೇಳೆ ಅಪಹರಣಕ್ಕೆ ಬಳಸಿದ ಟಿಜಿ 05 ಸಿ 1716 ಸಂಖ್ಯೆಯ ಕಿಯಾ ಕರೆನ್ಸ್ ಕಾರು ಹಾಗೂ ನಂಬರ್ ಪ್ಲೇಟ್ ಇಲ್ಲದ ಮಹಿಂದ್ರ ಥಾರ್ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಪಹರಣಕ್ಕೊಳಗಾದ ರಾಜೇಶ್ ಅವರನ್ನು ಪೊಲೀಸರು ಸುರಕ್ಷಿತವಾಗಿ ಪತ್ತೆಹಚ್ಚಿ ರಕ್ಷಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.



