ಉಡುಪಿ: ಮಟ್ಟು ಬೀಚ್ ನಲ್ಲಿ ಸಮುದ್ರಕ್ಕೆ ಇಳಿದು ಆಟವಾಡುತ್ತಿದ್ದ ಆರು ಮಂದಿ ವಿದ್ಯಾರ್ಥಿಗಳಲ್ಲಿ ಓರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮಧ್ಯಪ್ರದೇಶ ಮೂಲದ ವೀರೂರುಲ್ಕರ್ (18) ಮುಳುಗಿ ಮೃತಪಟ್ಟ ವಿದ್ಯಾರ್ಥಿ.

ಶನಿವಾರದಂದು ಕಾಪು ತಾಲೂಕಿನ ಮಟ್ಟು ಬೀಚ್ ನಲ್ಲಿ ಮಣಿಪಾಲದ ಕಾಲೇಜೊಂದರ ಆರು ಜನ ವಿದ್ಯಾರ್ಥಿಗಳು ಆಡವಾಡಲು ನೀರಿಗೆ ಇಳಿದಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಈ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದರು. ಬಳಿಕ ಅಲ್ಲಿಂದ ಪಕ್ಕದ ಸಮುದ್ರ ತೀರಕ್ಕೆ ತೆರಳಿ ಆಟವಾಡುತ್ತಿದ್ದಾಗ, ಓರ್ವ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸ್ಥಳೀಯರಾದ ಆರ್ಯನ್, ಪ್ರವೀಣ್ ಮತ್ತಿತರರು ರಕ್ಷಣಾ ಕಾರ್ಯ ನಡೆಸಿ ಉಳಿದ ವಿದ್ಯಾರ್ಥಿಗಳನ್ನು ಕಾಪಾಡಿದ್ದಾರೆ. ಕಾಪು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
