ಉಡುಪಿ :ಉಡುಪಿ ಜಿಲ್ಲೆಯಲ್ಲಿ ಮಟ್ಕಾ ಕಿಂಗ್ ಎಂದೆ ಗುರುತಿಸಿಕೊಂಡಿರುವ ಲಿಯೋ ಕರ್ನೆಲಿಯೋನಿಗೆ ಎರಡನೇ ಹೆಚ್ಚುವರಿ ಸಿವಿಲ್ ಹಾಗೂ ಜೆಎಮ್‌ಎಫ್‌ಸಿ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಕಾಪು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೇ ಲಿಯೋ ಮೇಲೆ ವಾರಂಟ್ ಜಾರಿಯಾಗಿತ್ತು. ಹೀಗಾಗಿ ವಾರೆಂಟ್ ಆಧಾರದ ಮೇಲೆ ಲೀಯೋ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು, ಈ ಸಂದರ್ಭ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಜಿಲ್ಲೆಯಲ್ಲಿ ಮಟ್ಕಾ ದಂಧೆ ವಿಚಾರದಲ್ಲಿ ಕುಖ್ಯಾತಿ ಪಡೆದಿರುವ ಲಿಯೋ ಮೇಲೆ ಉಡುಪಿಯಲ್ಲಿಯ ಹಲವು ಪೊಲೀಸ್ ಠಾಣೆಯಲ್ಲಿ ಮಟ್ಕಾ ಸಂಬಂಧ 34 ಪ್ರಕರಣಗಳು ದಾಖಲಾಗಿತ್ತು. ಉಡುಪಿ ಜಿಲ್ಲೆಗೆ ಹರಿರಾಮ್ ಶಂಕರ್ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಂದರೆ ಜೂನ್ ಮೊದಲ ವಾರದಲ್ಲಿ ಶಿರ್ವ ಠಾಣಾ ವ್ಯಾಪ್ತಿಯ ಶಂಕರಪುರದಲ್ಲಿ ಮಟ್ಕಾ ಅಡ್ಡೆಗೆ ಕಾರ್ಕಳ ಎಎಸ್ಪಿ ಹರ್ಷಪ್ರಿಯಂವದ ಅವರ ಮಾರ್ಗದರ್ಶನದಲ್ಲಿ ಶಿರ್ವ ಠಾಣಾಧಿಕಾರಿ ಮಂಜುನಾಥ್ ಮರಬದ ಮತ್ತವರ ತಂಡ ಕಾರ್ಯಾಚರಣೆ ನಡೆಸಿದಾಗ, ಲಿಯೋ ಕರ್ನೆಲೋ ಹಾಗೂ ಸ್ಥಳೀಯ ವ್ಯಕ್ತಿ ವಿಠ್ಠಲನನ್ನು ಬಂಧಿಸಿದ್ದರು.