Sunday, March 16, 2025

spot_img

ಮಕ್ಕಳ ಹಕ್ಕು ಮತ್ತು ಕರ್ತವ್ಯಗಳನ್ನು ರಕ್ಷಣೆ, ನಮ್ಮೆಲ್ಲರ ಜವಾಬ್ದಾರಿ : ಜಿಲ್ಲಾ ನ್ಯಾಯಾಧೀಶ ಕಿರಣ್ ಎಸ್ ಗಂಗಣ್ಣನವರ್

ಉಡುಪಿ : ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಮಕ್ಕಳ ಹಕ್ಕು ಮತ್ತು ಕರ್ತವ್ಯಗಳನ್ನು ಸಂರಕ್ಷಣೆ ಮಾಡುವುದು ಪೋಷಕರು ಅಧಿಕಾರಿಗಳು ಸೇರಿದಂತೆ ನಾಗರೀಕ ಸಮಾಜದ ಜವಾಬ್ದಾರಿಯಾಗಿದೆ. ಇದನ್ನು ಆದ್ಯತೆಯ ಮೇಲೆ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಕಿರಣ್ ಎಸ್.ಗಂಗಣ್ಣನವರ್ ಹೇಳಿದರು.

ಅವರು ಇಂದು ನಗರದ ಬನ್ನಂಜೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೋಲಿಸ್ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಇವರ ಸಹಯೋಗದಲ್ಲಿ
ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾಯ್ದೆಗಳ ಕುರಿತು ಠಾಣೆಯ ಮಕ್ಕಳ ಕಲ್ಯಾಣ ಪೋಲಿಸ್ ಅಧಿಕಾರಿ (ಪಿಎಸ್‌ಐ) ಮತ್ತು ಸಹಾಯಕ ಮಕ್ಕಳ
ಕಲ್ಯಾಣ ಪೋಲಿಸ್ ಅಧಿಕಾರಿಗಳಿಗೆ ನಡೆದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಾಮಾಣಿಕತೆ ಎನ್ನುವುದು ಸಾಮಾಜಿಕ ಜೀವನದಲ್ಲಿ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ. ನಾವು ನಮ್ಮ ಕರ್ತವ್ಯಗಳನ್ನು
ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ಕುಟುಂಬದಲ್ಲಿನ ಪೋಷಕರ ಭಿನ್ನಾಭಿಪ್ರಾಯಗಳು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ
ಬೀರುವುದರೊಂದಿಗೆ ಅವರುಗಳಲ್ಲಿ ಅಸುರಕ್ಷಿತ ಭಾವನೆ ಉಂಟು ಮಾಡುತ್ತದೆ. ಇದು ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಇರುವ
ಕಾನೂನುಗಳನ್ನು ಉಲ್ಲಂಘಿಸಲು ಪ್ರೇರೇಪಿಸುತ್ತದೆ. ಹಿರಿಯರು ಹೀಗಾಗದಂತೆ ಎಚ್ಚರವಹಿಸಬೇಕು ಎಂದರು.
ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಕಾಯಿದೆಗಳಲ್ಲಿ ಅಡಕವಾಗಿರುವ ವ್ಯಕ್ತಿ ಹಾಗೂ ವ್ಯಕ್ತಿತ್ವಗಳು ನಮ್ಮವರೇ ಆಗಿರುತ್ತಾರೆ. ಕೆಟ್ಟ
ಕೆಲಸಗಳನ್ನು ಮಾಡಿದವರ ವಿರುದ್ಧ ಸಾಕ್ಯಾಧಾರಗಳನ್ನು ಸಂಗ್ರಹಿರುವ ಸಂದರ್ಭದಲ್ಲಿ ಮನಸ್ಸು ಮತ್ತು ವಿವೇಕದಿಂದ ಕೆಲಸಗಳನ್ನು
ಮಾಡಿದಾಗ ಯಶಸ್ಸು ನಮ್ಮದಾಗುತ್ತದೆ. ಇಂತಹ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಅಂತರಾತ್ಮ ಹಾಗು ಅಂತರ್‌ಚಕ್ಷುವಿನಿಂದ ಕರ್ತವ್ಯ
ನಿರ್ವಹಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ಮಾತನಾಡಿ, ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಪ್ರತೀ ತಿಂಗಳು ನಿರಂತರವಾಗಿ
ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಇಂತಹ ಕಾರ್ಯಾಗಾರಗಳು ಜ್ಞಾನವನ್ನು ಹೆಚ್ಚಿಸುವುದರೊಂದಿಗೆ ಪರಿಣಾಮಕಾರಿಯಾಗಿ
ಕರ್ತವ್ಯ ನಿರ್ವಹಿಸಲು ಸಹಕಾರಿಯಾಗುತ್ತದೆ ಎಂದ ಅವರು, ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರ ಬಗೆಗಿನ ಪ್ರಕರಣಗಳಲ್ಲಿ
ಸೂಕ್ಷ್ಮವಾಗಿ ಯೋಚಿಸಿ, ವಿವೇಚನೆಯಿಂದ ಕಾನೂನಿನ ಅಡಿಯಲ್ಲಿ ನಿರ್ವಹಣೆ ಮಾಡಬೇಕು. ಹೀಗಾದಾಗ ಮಾತ್ರ ನೊಂದವರಿಗೆ ನ್ಯಾಯ
ಸಿಗಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ಮಕ್ಕಳ ಸುತ್ತಮುತ್ತಲಿನ ಪರಿಸರವು
ಅವರುಗಳ ಮೇಲೆ ಒತ್ತಡ ಹೇರುವುದರೊಂದಿಗೆ ತಪ್ಪು ಮಾಡಲು ಅನುವು ಮಾಡಿಕೊಡುತ್ತದೆ. ಈ ಸಂದರ್ಭದಲ್ಲಿ ಮಕ್ಕಳ ರಕ್ಷಣೆಗೆ
ಸಂಬಂಧಿಸಿದ ಕಾಯ್ದೆಗಳನ್ನು ಅನುಷ್ಠಾನಗೊಳಿಸುವಾಗ ಮಕ್ಕಳನ್ನು ಅಪರಾಧಿಗಳಂತೆ ನೋಡದೇ ಅವರುಗಳೊಂದಿಗೆ ಸೂಕ್ಷ್ಮವಾಗಿ
ವರ್ತಿಸಿ, ಘಟನೆಗೆ ಕಾರಣ ತಿಳಿಯುವುದರೊಂದಿಗೆ ಅವರುಗಳು ತಪ್ಪನ್ನು ತಿದ್ದುಕೊಂಡು ಮಗುವು ಸುಧಾರಣೆ ಹೊಂದಲು ದಾರಿ
ಮಾಡಿಕೊಡಬೇಕು ಎಂದರು.
ಕಲಿಕೆಗೆ ಕೊನೆ ಇರುವುದಿಲ್ಲ. ಅಂತಹ ಅಂಶಗಳನ್ನು ಕಾರ್ಯಾಗಾರದಲ್ಲಿ ತಿಳಿದುಕೊಳ್ಳುವುದರೊಂದಿಗೆ ಅಧಿಕಾರಿಗಳು ತಮ್ಮಲ್ಲಿರುವ
ಸಮಸ್ಯೆಗಳಿಗೆ ಹಾಗೂ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಯುನಿಸೆಫ್ ಮಕ್ಕಳ ರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ಡಾ.ಕೊಣಿಲ್ ರಾಘವೇಂದ್ರ
ಭಟ್ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಕಾಯ್ದೆಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ವಾಸ್ತವಿಕ
ನೆಲೆಯಲ್ಲಿ ಎದುರಿಸುವ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್
ಪಿ.ಆರ್, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗೂ ಬಾಲ ನ್ಯಾಯ
ಮಂಡಳಿಯ ಜಿಲ್ಲಾ ಅಧ್ಯಕ್ಷ ಮನುಪಟೇಲ್, ಹೆಚ್ಚುವರಿ ಎಸ್ಪಿಗಳಾದ ಎಸ್.ಟಿ ಸಿದ್ದಲಿಂಗಪ್ಪ ಹಾಗೂ ಪಿ.ಎ ಹೆಗಡೆ, ಮಕ್ಕಳ ರಕ್ಷಣಾ
ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ವಿವಿಧ ಠಾಣೆಗಳ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು, ಸಹಾಯಕ
ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯ ಮಕ್ಕಳ ಪೋಲಿಸ್ ಕಲ್ಯಾಣಾಧಿಕಾರಿ ಪ್ರಭು ಡಿ.ಟಿ ಸ್ವಾಗತಿಸಿ, ಆರಕ್ಷಕ ಯೋಗೀಶ್ ನಿರೂಪಿಸಿ, ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles