ಉಡುಪಿ : ಮಕ್ಕಳ ರಕ್ಷಣೆಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ಮಕ್ಕಳ ಹಕ್ಕುಗಳು, ಕಾನೂನುಗಳು ಮತ್ತು ರಕ್ಷಣಾ ವ್ಯವಸ್ಥೆಗಳ ಬಗ್ಗೆ ಸ್ಪಷ್ಟ ಜ್ಞಾನ ಹೊಂದಿದಾಗ ಮಾತ್ರ ಮಕ್ಕಳಿಗೆ ಪರಿಣಾಮಕಾರಿಯಾಗಿ ನ್ಯಾಯ ದೊರೆಯಲು ಸಾಧ್ಯ. ಮಕ್ಕಳ ನ್ಯಾಯವನ್ನು ಖಚಿತಪಡಿಸುವ ಜವಾಬ್ದಾರಿ ಎಲ್ಲರ ಮೇಲಿದ್ದು, ಸರ್ಕಾರ ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಪೂರ್ಣ ಬದ್ಧವಾಗಿದೆ ಎಂದು ಡಾ. ತಿಪ್ಪೇಸ್ವಾಮಿ ಕೆ.ಟಿ ಹೇಳಿದರು.

ಮಣಿಪಾಲದ ರಜತಾದ್ರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಜನಸಂಖ್ಯೆಯಲ್ಲಿ ಶೇ.40ರಷ್ಟು ಮಕ್ಕಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಅವರ ದೈಹಿಕ–ಮಾನಸಿಕ ಅಗತ್ಯಗಳನ್ನು ಅರಿತು ಭವಿಷ್ಯ ರೂಪಿಸುವ ಅಗತ್ಯವಿದೆ ಎಂದರು. ಜಿಲ್ಲೆಯಲ್ಲಿ 16,763 ಮಕ್ಕಳಿದ್ದು, ಸುಮಾರು 1,500 ಮಂದಿ ಭಿನ್ನ ಸಾಮರ್ಥ್ಯದ ಮಕ್ಕಳಾಗಿದ್ದಾರೆ; ಇವರಿಗೆ ವಿಶೇಷ ಕಾಳಜಿ ಅಗತ್ಯವೆಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಸಂವಿಧಾನಬದ್ಧ ಕರ್ತವ್ಯವಾಗಿದೆ ಎಂದರು. ಉಚಿತ ಹಾಗೂ ಕಡ್ಡಾಯ ಶಿಕ್ಷಣ, ಮಧ್ಯಾಹ್ನದ ಬಿಸಿ ಊಟ, ಸಮಗ್ರ ಶಿಕ್ಷಣ ಅಭಿಯಾನ, ಭ್ರೂಣಲಿಂಗ ಪತ್ತೆ ತಡೆ, ಬಾಲಕಾರ್ಮಿಕ ನಿಷೇಧ, ಪೋಕ್ಸೋ ಕಾಯ್ದೆ, ಬಾಲಾಪರಾಧಿ ನ್ಯಾಯ ಮಂಡಳಿ ಮುಂತಾದ ಕ್ರಮಗಳಿಂದ ಮಕ್ಕಳ ಭದ್ರತೆ ಹಾಗೂ ಭವಿಷ್ಯಕ್ಕೆ ಸರ್ಕಾರ ಒತ್ತು ನೀಡುತ್ತಿದೆ ಎಂದು ಹೇಳಿದರು.


ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಮಕ್ಕಳ ವಿಚಾರದಲ್ಲಿ ಹೆಚ್ಚು ಸಂವೇದನಾಶೀಲವಾಗಿ ನಡೆದು ತರಬೇತಿಯಲ್ಲಿ ಪಡೆದ ಜ್ಞಾನವನ್ನು ತಳಮಟ್ಟದಲ್ಲಿ ಅಳವಡಿಸಬೇಕೆಂದು ಸಲಹೆ ನೀಡಿದರು. ಯುನಿಸೆಫ್ ಪ್ರಾದೇಶಿಕ ಸಂಯೋಜಕ ಕೊಣಿಲ ರಾಘವೇಂದ್ರ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



