ಮಂಗಳೂರು : ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದೊಂದಿಗೆ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಕೌಶಲ್ಯಗಳ ವೃದ್ಧಿಯ ಬಗ್ಗೆ ಕಠಿಣ ಪರಿಶ್ರಮ ಅಗತ್ಯವಾಗಿದೆ ಎಂದು ರೋಲ್ಸ್ ರೋಯ್ಸ್ ಕಂಪನಿಯ ರೋಬೊಟಿಕ್ ಸಾಫ್ಟ್ವೇರ್ ಇಂಜಿನಿಯರ್ ರಿತುಪರ್ಣ ಕೆ. ಎಸ್. ನುಡಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗವು ಆಯೋಜಿಸಿದ ವಾಣಿಜ್ಯ ಸಂಘ ಉದ್ಘಾಟನೆ ಮತ್ತು ಪ್ರಥಮ ವರ್ಷದ ಎಂ.ಕಾಂ ವಿದ್ಯಾರ್ಥಿಗಳ ಫ್ರೆಷರ್ಸ್ ಡೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಯಶಸ್ವಿನ ಗುರಿ ತಲುಪಲು ನಿರಂತರವಾದ ಕಲಿಕೆಯ ಆಸಕ್ತಿ ಮತ್ತು ಸಂವಹನ ಕೌಶಲ್ಯ ಪ್ರಮುಖವಾಗಿದೆ ಎಂದರು. ತಂತ್ರಜ್ಞಾನದ ಬಳಕೆ, ಹೊಸ ಆವಿಷ್ಕಾರದ ಕಲಿಕೆ, ನೆಟ್ವರ್ಕ್ ಮುಂತಾದ ಪ್ರಚಲಿತ ವಿದ್ಯಮಾನಗಳನ್ನು ಗಮನಿಸಬೇಕು. ನಮ್ಮ ಕನಸನ್ನು ನನಸಾಗಿಸಲು ಛಲವು ಬಹಳ ಮಹತ್ವದಾಗಿದೆ ಎನ್ನುತ್ತಾ ತಮ್ಮ ವೈಯಕ್ತಿಕ ಸಾಧನೆಯ ಕುರಿತ ಪ್ರೇರಣದಾಯಕ ಮಾತುಗಳನ್ನಾಡಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಕೆ. ರಾಜು ಮೊಗವೀರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಸಾಧಕರ ಜೀವನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಹಾಗೂ ಕಲಿಕೆಯಲ್ಲಿ ಪ್ರಗತಿ ಹೊಂದಲು ವೈಯಕ್ತಿಕ ಸಾಧನೆ ಗಳಿಸಲು ಬದುಕಿನಲ್ಲಿ ಉತ್ತಮ ಮೌಲ್ಯವನ್ನು ಅಳವಡಿಸಿಕೊಳ್ಳುವುದನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು. ಕುಂದಾಪುರ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಉದಯ್ ಶೆಟ್ಟಿ ಕೆ. ಅತಿಥಿಗಳಾಗಿ ಮಾತನಾಡಿದರು.

ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಪ್ರೀತಿ ಕೀರ್ತಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ. ವೈ. ಮುನಿರಾಜು, ಡಾ. ಈಶ್ವರ ಪಿ, ಡಾ. ವೇದವ ಪಿ. ಮತ್ತು ಡಾ. ಪರಮೇಶ್ವರ, ಉಪನ್ಯಾಸಕರಾದ ಡಾ. ರಮ್ಯ ಕೆ. ಆರ್, ಸಿ. ಲಹರಿ, ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ರಾಜೇಶ್ ಬಿ. ಸಿ. ಧನ್ಯ, ಹರ್ಷಿತಾ ಬಿ. ಎನ್. ಉಪಸ್ಥಿತರಿದ್ದರು. ಉಪನ್ಯಾಸಕರಾದ ಡಾ. ದಿನಕರ ಕೆಂಜೂರು, ವೈಶಾಲಿ ಕೆ. ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ವಾಣಿಜ್ಯ ಸಂಘದ ಅಧ್ಯಕ್ಷರಾದ ಸುದರ್ಶನ್ ಮುಂದಿನ ವರ್ಷದ ವಾಣಿಜ್ಯ ಸಂಘದ ಕಾರ್ಯಚಟುವಟಿಕೆಗಳ ಪಟ್ಟಿಯನ್ನು ಮಂಡಿಸಿದರು. ಚೈತನ್ಯ ಸ್ವಾಗತಿಸಿದರೆ ಪಲ್ಲವಿ ಜೆ. ವಂದಿಸಿದರು. ರೇಷ್ಮಾ ಎನ್. ಮತ್ತು ತಂಡದವರು ಪ್ರಾರ್ಥಿಸಿದರು. ಸಜೀಲಾ ಕೆ. ಕಾರ್ಯಕ್ರಮ ನಿರೂಪಿಸಿದರು. ಇಂಜಿನಿಯರ್ ರಿತುಪರ್ಣ ಕೆ. ಎಸ್. ಅವರನ್ನು ವಾಣಿಜ್ಯ ಸಂಘದ ವತಿಯಿಂದ ಸನ್ಮಾನಿಸಲಾಯಿತು.