ಉಡುಪಿ: ಪರ್ಯಾಯ ಮಹೋತ್ಸವದ ಮೆರವಣಿಗೆಗೆ ಕೇಸರಿ ಧ್ವಜದ ಮೂಲಕ ಚಾಲನೆ ನೀಡಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ದಕ್ಷ ಮಹಿಳಾ ಜಿಲ್ಲಾಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ರಾಜಕೀಯ ಒತ್ತಡ ಹೇರುತ್ತಿರುವುದು ಖಂಡನೀಯ ಎಂದು ಬಿಜೆಪಿ ಉಡುಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರೇ ಉಸ್ತುವಾರಿಯಾಗಿರುವ ಜಿಲ್ಲೆಯಲ್ಲೇ ಮಹಿಳಾ ಜಿಲ್ಲಾಧಿಕಾರಿಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವ ರೀತಿಯಲ್ಲಿ ಕಾಂಗ್ರೆಸ್ ನಡೆದುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದರು. ಕೇವಲ ಆರು ತಿಂಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡಿರುವ ಜಿಲ್ಲಾಧಿಕಾರಿಗಳು, ಲಕ್ಷಾಂತರ ಮಂದಿ ಭಾಗವಹಿಸಿದ ಕರಾವಳಿ ಕರ್ನಾಟಕದ ನಾಡಹಬ್ಬ ಪರ್ಯಾಯ ಮಹೋತ್ಸವದ ಸಿದ್ಧತೆಗಾಗಿ ಸಮರೋಪಾದಿಯಲ್ಲಿ ಕೆಲಸ ಮಾಡಿದ್ದಾರೆ. ಇಂತಹ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸುವ ಮೂಲಕ ಕಾಂಗ್ರೆಸ್ ತನ್ನ ರಾಜಕೀಯ ದಿವಾಳಿತನವನ್ನು ಬಹಿರಂಗಪಡಿಸಿದೆ ಎಂದು ನೀತಾ ಪ್ರಭು ಆರೋಪಿಸಿದರು.

ಪರ್ಯಾಯ ಮಹೋತ್ಸವದ ಹಿನ್ನಲೆಯಲ್ಲಿ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಕಳೆದ ಎರಡು ಅವಧಿಗಳಲ್ಲೂ ರಾಜ್ಯ ಕಾಂಗ್ರೆಸ್ ಸರ್ಕಾರ ಅನುದಾನ ನೀಡಿಲ್ಲ. ಇದೀಗ ತನ್ನ ವೈಫಲ್ಯವನ್ನು ಮರೆಮಾಚಲು ಭಗವಾಧ್ವಜ ವಿವಾದವನ್ನು ಸೃಷ್ಟಿಸಿ ಜಿಲ್ಲಾಧಿಕಾರಿಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಅವರು ಟೀಕಿಸಿದರು. ಬಿಜೆಪಿ ಉಡುಪಿ ಮಹಿಳಾ ಮೋರ್ಚಾ ಜಿಲ್ಲೆಯ ಮಹಿಳಾ ಜಿಲ್ಲಾಧಿಕಾರಿಗಳ ಬೆಂಬಲಕ್ಕೆ ಸದಾ ನಿಲ್ಲಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಮಹಿಳಾ ವಿರೋಧಿ ಧೋರಣೆಯನ್ನು ತೀವ್ರವಾಗಿ ಖಂಡಿಸಲಾಗುವುದು ಎಂದು ನೀತಾ ಪ್ರಭು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



