ಉಡುಪಿ : ಗೆಳೆಯರ ಬ್ಲ್ಯಾಕ್ ಮೇಲ್ ಒತ್ತಡ ತಾಳಲಾರದೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ. ನಿಟ್ಟೆ ಗ್ರಾಮದ ಅಭಿಷೇಕ್ (23) ಬೆಳ್ಮಣ್ಣಿನ ಖಾಸಗಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಾತ.

ಅಭಿಷೇಕ್ ತಾನು ಪ್ರೀತಿಸಿದ ಯುವತಿ ಜತೆಗಿದ್ದ ಖಾಸಗಿ ವಿಡಿಯೋವನ್ನು ಗೆಳೆಯರು ಸೆರೆ ಹಿಡಿದಿದ್ದರು ಎನ್ನಲಾಗಿದೆ. ಬಳಿಕ ಇದೇ ವಿಡಿಯೋ ವೈರಲ್ ಮಾಡುವುದಾಗಿ ಗೆಳೆಯರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕ ಆತ್ಮಹತ್ಯೆಗೂ ಮೊದಲು ಡೆತ್ ನೋಟ್ ನಲ್ಲಿ ಬ್ಲ್ಯಾಕ್ ಮೇಲ್ ಮಾಡಿದ ನಾಲ್ವರು ಹೆಸರು ಉಲ್ಲೇಖಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ಮೃತ ಯುವಕನ ಮೊಬೈಲ್ ಮತ್ತು ತಾಂತ್ರಿಕ ಆಯಾಮದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.


