ಬ್ರಹ್ಮಾವರ: ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಡಿಸೆಂಬರ್ 12ರಂದು ಚಿಣ್ಣರ ಕ್ರೀಡಾಕೂಟವನ್ನು ಆಯೋಜಿಸಲಾಯಿತು. ರಾಷ್ಟ್ರಮಟ್ಟದ ಚೆಸ್ ಆಟಗಾರ ಪೂರ್ಣೇಶ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಮಾತನಾಡಿದ ಪೂರ್ಣೇಶ್, ಜಿ.ಎಂ. ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆದ ಅನೇಕ ವಿದ್ಯಾರ್ಥಿಗಳು ಕ್ರೀಡಾಕ್ಷೇತ್ರದಲ್ಲಿ ಶ್ಲಾಘನೀಯ ಸಾಧನೆಗಳನ್ನು ಮಾಡಿರುವುದನ್ನು ಸ್ಮರಿಸಿದರು. ಮಕ್ಕಳಲ್ಲಿ ಕನಿಷ್ಠ ಒಂದಾದರೂ ಕ್ರೀಡೆಯಲ್ಲಿ ಕೌಶಲ್ಯ ಬೆಳೆಸಲು ಪೋಷಕರು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್‌ಚಂದ್ರ ಶೆಟ್ಟಿ, ಪುಟಾಣಿ ಮಕ್ಕಳಿಗೆ ಶುಭಾಶಯ ತಿಳಿಸಿ ಮಾತನಾಡಿ, ಚಿಕ್ಕವಯಸ್ಸಿನಲ್ಲೇ ಪೋಷಕರು ಮಕ್ಕಳ ಶಾಲಾ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಆದರೆ ಮಕ್ಕಳು ದೊಡ್ಡವರಾದಂತೆ ಆ ಆಸಕ್ತಿ ಕಡಿಮೆಯಾಗಬಾರದು. ಅಂಕಗಳ ಜೊತೆಗೆ ಕ್ರೀಡೆ ಕೂಡ ವಿದ್ಯಾರ್ಥಿಗಳ ಅಭಿವೃದ್ಧಿಗೆ ಸಮಾನವಾಗಿ ಮುಖ್ಯ ಎಂದರು.

ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್ ಅವರು ಶಾಲಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕ್ರೀಡೆಗಳು ಸಮಾಜಮುಖಿ ಹಾಗೂ ನೈತಿಕ ಮೌಲ್ಯಗಳನ್ನು ರೂಪಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯಗಳ ಬಲವರ್ಧನೆಗೆ ಸಹಕಾರಿ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಪೋಷಕರಿಗಾಗಿ ಮನೋರಂಜನಾ ಸ್ಪರ್ಧೆಗಳು ಆಯೋಜಿಸಲ್ಪಟ್ಟು, ಪುಟಾಣಿ ಕ್ರೀಡಾಳುಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಿ-ನರ್ಸರಿ ಇಂದ ಎರಡನೇ ತರಗತಿ ವರೆಗೆ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹಭರಿತವಾಗಿ ಪಾಲ್ಗೊಂಡು ಕ್ರೀಡಾಸ್ಫೂರ್ತಿ ಮೆರೆದರು. ವಿದ್ಯಾ ಹೌಸ್ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್‌ಚಂದ್ರ ಶೆಟ್ಟಿ, ಶ್ರೀಮಾ ಪ್ರಣವ್ ಶೆಟ್ಟಿ, ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



