ಉಡುಪಿ: ಹೂವು ಕೀಳುತ್ತಿದ್ದ ವೃದ್ಧ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಕರಿಮಣಿ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ ಮೂವರು ಅಂತರ್ ರಾಜ್ಯ ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಗೋವಾ ನಿವಾಸಿ ಗೌರೀಶ ರೋಹಿದಾಸ್ ಕೆರ್ಕರ್ (37), ಬಿಜಾಪುರ ಜಿಲ್ಲೆ ಸಿಂಧಗಿ ನಿವಾಸಿ ಮೈನುದ್ದೀನ್ ಬಾಗಲಕೋಟ್ (31) ಮತ್ತು ಮಹಾರಾಷ್ಟ್ರದ ವಿಲೆಪಾರ್ಲೆ ನಿವಾಸಿ ಸುರ್ಜಿತ್ ಗೌತಮ್ ಕಾರ್(27) ಎಂದು ಗುರುತಿಸಲಾಗಿದೆ.

ಎ.26 ರಂದು ಬೆಳಿಗ್ಗೆ ಬ್ರಹ್ಮಾವರದ ವಾರಂಬಳ್ಳಿ ಆದರ್ಶ ನಗರದ ಮನೆಯಲ್ಲಿದ್ದ ವೃದ್ಧ ಮಹಿಳೆ ಪದ್ಮ ಎಂಬವರು ತನ್ನ ಮನೆಯ ಕಂಪೌಂಡಿನ ಹೊರಗಡೆ ಕಾಂಕ್ರೀಟ್ ರಸ್ತೆಯಲ್ಲಿ ಹೂವುಗಳನ್ನು ಕೀಳುತ್ತಿದ್ದಾಗ ಅಪರಿಚಿತ ಕಾರಿನಲ್ಲಿ ಬಂದ ಆರೋಪಿಗಳ ಪೈಕಿ ಒಬ್ಬ ಕಾರಿನಿಂದ ಇಳಿದು, ಮಹಿಳೆಗೆ ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ ಸುಮಾರು 40 ಗ್ರಾಂ ತೂಕದ ₹2.50 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಹಿಡಿದೆಳೆದು ಪರಾರಿಯಾಗಿದ್ದರು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ಜಾಡು ಹಿಡಿದ ಬ್ರಹ್ಮಾವರ ಸಿಪಿಐ ಗೋಪಿಕೃಷ್ಣ ಅವರ ತಂಡ, ಯಲ್ಲಾಪುರ ಸಿಪಿಐ ರಮೇಶ ಹಾನಾಪುರ, ಪಿಎಸ್ಐ ಯಲ್ಲಾಲಿಂಗ ಕುನ್ನೂರ, ಸಿಹೆಚ್‌ಸಿ ಮಹಮ್ಮದ್ ಶಫಿ, ಎ.ಶೇಖ್, ಗಿರೀಶ್ ಲಮಾಣಿ, ಶೋಭಾರವರ ಸಹಕಾರದೊಂದಿಗೆ ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಬಂಧಿಸಲಾಗಿದೆ.

ಬ್ರಹ್ಮಾವರ ಪಿಎಸ್ಐ ಸುದರ್ಶನ್ ದೊಡ್ಡಮನಿ, ಮಹಾಂತೇಶ ಜಾಬಗೌಡ, ಹಿರಿಯಡ್ಕ ಠಾಣಾ ಪಿಎಸ್ಐ ಪುನೀತ್ ಬಿ.ಇ, ಬ್ರಹ್ಮಾವರ ಠಾಣಾ ಸಿಹೆಚ್‌ಸಿ ಇಮ್ರಾನ್, ಸಿಪಿಸಿ ಮಹಮ್ಮದ್ ಅಜ್ಮಲ್, ಸಿಪಿಸಿ ಕಿರಣ್, ಕೋಟ ಠಾಣಾ ಸಿಪಿಸಿ ರಾಘವೇಂದ್ರ, ಸಿಪಿಸಿ ವಿಜಯೇಂದ್ರ, ಹಿರಿಯಡ್ಕ ಠಾಣಾ ಸಿಪಿಸಿ ಕಾರ್ತಿಕ್, ಸಿಪಿಸಿ ಹೇಮಂತ್, ಬ್ರಹ್ಮಾವರ ವೃತ್ತ ಕಛೇರಿಯ ಎಎಸ್ಐ ಕೃಷ್ಣಪ್ಪ, ವಿಶ್ವನಾಥ ಶೆಟ್ಟಿ ತಂಡ ಭಾಗವಹಿಸಿದೆ.