ಉಡುಪಿ : ಹಾಡಹಗಲೇ ಬೀಗ ಮುರಿದು ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪಡುವರಿ ಗ್ರಾಮದಲ್ಲಿ ನಡೆದಿದೆ. ಪಟವಾಲ್ ಹೌಸ್‌ನ ನಿವಾಸಿ ಪರಮೇಶ್ವರ ಪಟವಾಲ್ ಅವರ ಮನೆಯಲ್ಲಿ ಈ ಕಳವು ನಡೆದಿದ್ದು, ಅಂದಾಜು 20 ಪವನ್ ಚಿನ್ನಾಭರಣ ಹಾಗೂ ಸುಮಾರು 2 ಲಕ್ಷ ನಗದು ಕಳ್ಳರು ದೋಚಿಕೊಂಡು ಪರಾರಿಯಾಗಿದ್ದಾರೆ.

ಘಟನೆ ಸಂಭವಿಸಿದ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ. ಮನೆ ಸುತ್ತಮುತ್ತ ಜನನಿಬಿಡ ಪ್ರದೇಶವಾಗಿದ್ದು, ಪಡುವರಿ–ಸೋಮೇಶ್ವರ ರಸ್ತೆ ಸಮೀಪದಲ್ಲಿಯೇ ಈ ಮನೆ ಇದೆ. ಹಂಚಿನ ಮನೆ ಆಗಿರುವುದರಿಂದ ಕಳ್ಳರು ಬೀಗ ಮುರಿದು ಒಳನುಗ್ಗುವುದು ಸುಲಭವಾಗಿತ್ತು ಎನ್ನಲಾಗಿದೆ. ಈ ಮನೆಯಲ್ಲಿ ಪರಮೇಶ್ವರ ಪಟವಾಲ್ ಅವರ ಮಗ, ಸೊಸೆ ಹಾಗೂ ಇಬ್ಬರು ಮಕ್ಕಳು ವಾಸವಾಗಿದ್ದಾರೆ. ಮನೆಯ ಬಗ್ಗೆ ಪೂರ್ವ ಮಾಹಿತಿ ಹೊಂದಿದ್ದವರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಘಟನೆಯ ಮಾಹಿತಿ ಪಡೆದ ಬಳಿಕ ಶ್ವಾನದಳವನ್ನು ಸ್ಥಳಕ್ಕೆ ಕರೆತರಲಾಗಿದ್ದು, ಅದು ಮನೆಯ ಪಕ್ಕದ ರಸ್ತೆಯವರೆಗೆ ತೆರಳಿ ಮರಳಿದೆ. ಬೆರಳಚ್ಚು ತಜ್ಞರ ತಂಡ ಹಾಗೂ ಬೈಂದೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಿ ಕಳ್ಳರ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಮಂಗಳವಾರ ಬೈಂದೂರು ಬಂಕೇಶ್ವರ ರಸ್ತೆಯ ಚಿನ್ನದ ಅಂಗಡಿಗೆ ನುಗ್ಗಿದ ಕಳ್ಳರ ತಂಡ ಬೆಳ್ಳಿಯ ಆಭರಣಗಳನ್ನು ಕದ್ದೊಯ್ದಿದ್ದ ಘಟನೆ ನಡೆದಿತ್ತು. ಇತ್ತೀಚೆಗೆ ಪರಿಸರದಲ್ಲಿ ಕಳವು ಪ್ರಕರಣಗಳು ಹೆಚ್ಚುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.



