ಬೈಂದೂರು: ಚಲಿಸುತ್ತಿದ್ದ ಕಾರಿಗೆ ಅಚಾನಕ್ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಬೈಂದೂರು ತಾಲೂಕಿನ ನಾವುಂದ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-66 ಮೇಲ್ಸೇತುವೆಯಲ್ಲಿ ನಡೆದಿದೆ.

ಕುಂದಾಪುರದಿಂದ ಬೈಂದೂರಿನ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದ ಇಬ್ಬರು ಸವಾರರು ಸಮಯಕ್ಕೆ ಸರಿಯಾಗಿ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿತೇಶ್ (31) ಮತ್ತು ಚಂದು (73) ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲಕಾಲ ವಾಹನ ಸಂಚಾರದಲ್ಲಿ ಆತಂಕದ ವಾತಾವರಣ ಉಂಟಾಯಿತು.

ಮಾಹಿತಿ ದೊರಕುತ್ತಿದ್ದಂತೆ ಸ್ಥಳಕ್ಕೆ ಬಂದ ಬೈಂದೂರು ಅಗ್ನಿಶಾಮಕ ದಳ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಿದ್ದಾರೆ.

ಕಾರಿನೊಳಗೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿರುವುದರಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.



