ಬೈಂದೂರು: ಬೈಂದೂರಿನ ನಾಲ್ಕು ಶಾಲೆಗಳ ಕಿಶೋರ ಯಕ್ಷಗಾನ ಪ್ರದರ್ಶನಗಳು ಡಿ.27, 2025ರಂದು ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಮೊಗೇರಿ ಗೋಪಾಲಕೃಷ್ಣ ಅಡಿಗ ರಂಗಮಂಟಪದಲ್ಲಿ ಭಾನುವಾರ ಆರಂಭಗೊಂಡವು. ಕಾರ್ಯಕ್ರಮವನ್ನು ಜಗನ್ನಾಥ ಶೆಟ್ಟಿ ನಾಕಟ್ಟೆ ಉದ್ಘಾಟಿಸಿದರು. ಜಯಾನಂದ ಹೋಬಳಿದಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ವಿಶ್ವೇಶ್ವರ ಅಡಿಗರು ಮಾತನಾಡಿ, ಯಕ್ಷಗಾನವು ವೇಷಭೂಷಣ, ಕುಣಿತ, ಅಭಿನಯ, ಮಾತುಗಾರಿಕೆ ಸೇರಿದಂತೆ ಎಲ್ಲ ಅಂಶಗಳನ್ನು ಒಳಗೊಂಡ ಪರಿಪೂರ್ಣ ಕಲಾಪ್ರಕಾರವಾಗಿದ್ದು, ವಿದ್ಯಾರ್ಥಿಗಳು ಇದರಲ್ಲಿ ತರಬೇತಿ ಪಡೆಯುವುದರಿಂದ ಅವರ ಸರ್ವಾಂಗೀಣ ವ್ಯಕ್ತಿತ್ವ ವಿಕಾಸ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಮೇಶ್ ಬಿ., ಸತೀಶ್ ಶೆಟ್ಟಿ, ನಾಗೇಂದ್ರ ದೇವಾಡಿಗ, ಶಾಲಾ ಉಪಪ್ರಾಂಶುಪಾಲ ಪದ್ಮನಾಭ, ನಾರಾಯಣ ಎಂ. ಹೆಗಡೆ ಅಭ್ಯಾಗತರಾಗಿ ಭಾಗವಹಿಸಿದ್ದರು. ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುರೇಶ್ ಬಟವಾಡಿ ಸ್ವಾಗತಿಸಿದರು. ಪ್ರಭಾಕರ ಎಸ್. ವಂದಿಸಿದರು. ಅಧ್ಯಾಪಕ ರವೀಂದ್ರ ಕಾರ್ಯಕ್ರಮ ನಿರೂಪಿಸಿದರು. ಯಕ್ಷಗುರು ನರಸಿಂಹ ತುಂಗ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಸರಕಾರಿ ಪ್ರೌಢಶಾಲೆ ಕಂಬದಕೋಣೆ ವಿದ್ಯಾರ್ಥಿಗಳಿಂದ ಪ್ರಶಾಂತ್ ಮಯ್ಯ ನಿರ್ದೇಶನದಲ್ಲಿ ‘ಸುಧನ್ವಾರ್ಜುನ’ ಹಾಗೂ ಬೈಂದೂರಿನ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಉಪ್ಪುಂದ ಗಣೇಶ್ ನಿರ್ದೇಶನದಲ್ಲಿ ‘ರತ್ನಾವತಿ ಕಲ್ಯಾಣ’ ಯಕ್ಷಗಾನ ಪ್ರಸಂಗಗಳು ಪ್ರಸ್ತುತಗೊಂಡವು.


