ಕಾಪು : ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಇದರ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಮತ್ತವರ ಪತ್ನಿ ಹಾಗೂ ಪುತ್ರ ಇಂದು ಪುನರ್ ನಿರ್ಮಾಣಗೊಂಡಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾರಿಯಮ್ಮನ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಬಿಲ್ಲವ ಸ್ತಂಭದ ಪರವಾಗಿ 99 ಶಿಲಾಸೇವೆಯನ್ನು ನೀಡಿದ ಅವರನ್ನು ಅಭಿವೃದ್ಧಿ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯರನ್ನು ಒಳಗೊಂಡು ಗೌರವಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಲಾಯಿತು. ಈ ದೇಗುಲಕ್ಕೆ ನನ್ನ ಮಾವ ಬರುತ್ತಿದ್ದರು, ಇದೀಗ ನಾವು ಬರುವಂತಾಗಿದೆ. ಈ ದೇಗುಲ ನಿರ್ಮಾಣ ಇತರ ದೇಗುಲಗಳಿಗೆ ಮಾದರಿಯಾಗಿದೆ, ರಾಜ್ಯ ಸರ್ಕಾರ ಬೇರೆ ದೇವಸ್ಥಾನಗಳಿಗೆ ನೀಡುವಂತೆ ಇಲ್ಲಿನ ಅಭಿವೃದ್ಧಿಗೂ 50 ಕೋಟಿ ಅಥವಾ 100 ಕೋಟಿ ಅನುದಾನ ಬಿಡುಗಡೆ ಮಾಡಬೇಕೆಂದು ಮಾಧ್ಯಮದ ಮೂಲಕ ಸರಕಾರಕ್ಕೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರತ್ನಾಕರ ಶೆಟ್ಟಿ ನಡಿಕೆರೆ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಮಾಧವ ಆರ್ ಪಾಲನ್, ರವೀಂದ್ರ ಎಂ, ಚರಿತ ದೇವಾಡಿಗ, ನವದುರ್ಗಾ ಲೇಖನ ಯಜ್ಞ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷರಾದ ಗೀತಾಂಜಲಿ ಎಂ ಸುವರ್ಣ, ಕಚೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕರಾದ ಮಧುಕರ್ ಎಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.