ಕೆಲವು ವರ್ಷಗಳ ಹಿಂದೆ ಯಕ್ಷಗಾನ ಲೋಕದಲ್ಲಿ ಹೊಸ ಬದಲಾವಣೆ ಎನ್ನುವಂತೆ ಒಂದು ಹೊಸ ಪ್ರಯೋಗ ನಡೆದಿತ್ತು. ಬ್ರಹ್ಮಾವರದಲ್ಲಿ ಆಯೋಜಿಸಲಾದ ವಿಸ್ಮಯಂ ಎಂಬ ಹೆಸರಿನ ತಂಡದಿಂದ ಯಕ್ಷಗಾನಕ್ಕೆ ಆಧುನಿಕತೆಯ ಸ್ಪರ್ಶ ನೀಡುವ ಪ್ರಯತ್ನ ಮಾಡಿತ್ತು. ಗದಾಯುದ್ಧ ಪ್ರಸಂಗ ಪ್ರದರ್ಶನ ಬಹುತೇಕ ರಂಗಸ್ಥಳದಲ್ಲಿ ನಡೆದರೆ, ವೈಶಂಪಾಯನ ನದಿಯಲ್ಲಿ ದುರ್ಯೋಧನ ಮುಳುಗಿ ಕುಳಿತುಕೊಳ್ಳುವ ದೃಶ್ಯಗಳನ್ನ ರಂಗಸ್ಥಳದ ಪಕ್ಕದ ಎಲ್ಇಡಿ ಪರದೆಯ ಮೇಲೆ ತೋರಿಸುವ ಮೂಲಕ ಹೊಸ ಬದಲಾವಣೆಗೆ ನಾಂದಿ ಹಾಡಲಾಗಿತ್ತು. ನೀರಿನಲ್ಲಿ ಮುಳುಗಿರುವ ದುರ್ಯೋಧನ ದೇಶದ ಯಕ್ಷಗಾನ ಪಾತ್ರಧಾರಿಯನ್ನ ತೆರೆಯ ಮೇಲೆ ನೋಡುವಾಗ ಒಂದು ಹೊಸ ಅನುಭವ ಯಕ್ಷಾಸಕ್ತರಿಗೆ ಸಿಕ್ಕಿತ್ತು ಎನ್ನಬಹುದು. ಆ ಬಳಿಕ ಇಂತಹ ಹೊಸ ಪ್ರಯೋಗಗಳು ಯಕ್ಷರಂಗದಲ್ಲಿ ಕಾಣಿಸಿಕೊಂಡಿಲ್ಲ ಎನ್ನಬಹುದು. ದೊಂದಿ ಬೆಳಕಿನ ಯಕ್ಷಗಾನ, ಅಟ್ಟಣಿಗೆಯ ಯಕ್ಷಗಾನ ಹೀಗೆ ಗತಕಾಲದ ನೆನಪು ಮೂಡಿಸುವ ಹಳೆ ಪದ್ಧತಿಯ ಹೊಸ ಪ್ರಯೋಗಗಳು ಇಂದಿಗೂ ಕೂಡ ಯಕ್ಷಗಾನದಲ್ಲಿ ಚಾಲ್ತಿಯಲ್ಲಿದೆ ಮತ್ತು ಯಕ್ಷ ರಸಿಕರು ಆ ವಿಶೇಷವನ್ನು ನೋಡಲು ದೂರದ ಊರುಗಳಿಂದ ಬಂದು ಯಕ್ಷಗಾನ ವೀಕ್ಷಿಸುವುದು ಅದರ ಜನಪ್ರಿಯತೆಗೆ ಕಾರಣ ಎನ್ನಲಡ್ಡಿಲ್ಲ.
ಸದ್ಯ ಹಿಂದೆಂದೂ ಕೇಳಿರದ ಊಹಿಸಲು ಸಾಧ್ಯವಿರದ ಒಂದು ಹೊಸ ಪ್ರಯೋಗವನ್ನು ಕರಾವಳಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಮಾಡಲು ಹೊರಟಿದ್ದಾರೆ.

ಕರಾವಳಿಯಿಂದ ಸಿನಿಮಾ ರಂಗಕ್ಕೆ ತೆರಳಿದ ಅದೆಷ್ಟೋ ಪ್ರತಿಭೆಗಳು ಇಂದಿಗೂ ಕೂಡ ಕರಾವಳಿಯ ಕಂಪನ್ನು ಬಿಟ್ಟು ಕೊಟ್ಟಿಲ್ಲ. ಇದಕ್ಕೆ ಹೊಸ ಸೇರ್ಪಡೆ ಎಂದರೆ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು. ಮಾಡಲು ಬಿಡುವಿಲ್ಲದಷ್ಟು ಕೆಲಸದ ನಡುವೆಯೂ ಕೂಡ ವರ್ಷಕ್ಕೊಂದು ಕರಾವಳಿಯ ಕಂಪಿನ ಚಿತ್ರ ನಿರ್ಮಿಸಬೇಕು ಎನ್ನುವುದು ನನ್ನ ಬಯಕೆ ಎಂದು ಈ ಹಿಂದೆ ಎಲ್ಲೋ ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದ ನೆನಪು. ಹೀಗಾಗಿ ಈ ಬಾರಿ ಯಕ್ಷಗಾನವನ್ನು ಬೆಳ್ಳೆ ತೆರೆಯ ಮೇಲೆ ತರುವ ಒಂದು ಸಾಹಸಕ್ಕೆ ರವಿ ಬಸ್ರೂರು ಕೈ ಹಾಕಿದ್ದಾರೆ. ಡಾ. ರಾಜಕುಮಾರ್ ಅಭಿನಯದ ನಾ ನಿನ್ನ ಮರೆಯಲಾರೆ ಚಿತ್ರದ ಒಂದು ದೃಶ್ಯದಲ್ಲಿ ಯಕ್ಷಗಾನದ ರತಿ ಮನ್ಮಥರ ಪ್ರಸಂಗ ಅದ್ಭುತವಾಗಿ ಚಿತ್ರದ ಕಥೆಯೊಂದಿಗೆ ಸಂಯೋಜಿಸಿ ತೋರಿಸಿದ್ದರು. ಇಂದಿಗೂ ಆ ಚಿತ್ರವನ್ನು ನೋಡುವಾಗ ಆ ಒಂದು ಯಕ್ಷಗಾನದ ಪ್ರದರ್ಶನದ ದೃಶ್ಯ ಯಕ್ಷರಸಿಕರಿಗೆ ಖುಷಿ ನೀಡುತ್ತದೆ. ಹೀಗೆ ಕೇವಲ ಒಂದು ದೃಶ್ಯಕ್ಕೆ ಸೀಮಿತವಾಗಿದ್ದ ಯಕ್ಷಗಾನ ಕಲೆ ಈಗ ಇಡೀ ಚಿತ್ರವೇ ಯಕ್ಷಗಾನದ ಮೂಲಕ ತೋರಿಸಲು ಹೊರಟಿರುವುದು ಒಂದು ಎದೆಗಾರಿಕೆ ಎಂದರೆ ತಪ್ಪಾಗಲಾರದು. ಯಕ್ಷಗಾನ ಕಲೆಯನ್ನು ಒಂದು ದೈವಿಕ ಕಲೆ ಎಂದೆ ಪರಿಗಣಿಸಲಾಗುತ್ತದೆ, ಯಾಕೆಂದರೆ ಯಕ್ಷಗಾನವನ್ನು ಬೆಳಕಿನ ಸೇವೆ ಎಂದು ಭಕ್ತಿ ಶ್ರದ್ದೆಯಿಂದ ಮಾಡಿಸುವ ಕರಾವಳಿಯಲ್ಲಿ, ಇಡೀ ಚಿತ್ರವೇ ಯಕ್ಷಗಾನದ ಮೂಲಕ ತೋರಿಸಲು ಹೊರಟಿರುವುದು ಒಂದು ಸಾಧನೆ ಎನ್ನಬಹುದು.
ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ನಿರ್ದೇಶಕ ರವಿ ಬಸ್ರೂರು “ವೀರ ಚಂದ್ರಹಾಸ” ಚಿತ್ರವನ್ನು ತೆರೆಯ ಮೇಲೆ ತರುತ್ತಿದ್ದಾರೆ.

ಯಕ್ಷಗಾನ ಲೋಕದಲ್ಲಿ ಸಾಕಷ್ಟು ಜನಮನ್ನಣೆಗೆ ಪಾತ್ರವಾಗಿರುವ ಚಂದ್ರಹಾಸ ಇಂದಿಗೂ ಕೂಡ ಜನರ ಅಚ್ಚುಮೆಚ್ಚಿನ ಪ್ರಸಂಗಗಳಲ್ಲಿ ಒಂದು. ಯಕ್ಷಗಾನ ರಸಿಕರಿಗೆ ಪ್ರಸಂಗದ ಸಂಪೂರ್ಣ ಕಥೆಯ ಮಾಹಿತಿ ಇದ್ದರೂ ಕೂಡ ಯಾವ ಕಲಾವಿದ ಯಾವ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ ಎನ್ನುವುದನ್ನು ನೋಡುವುದಕ್ಕೆ ರಾತ್ರಿ ಇಡೀ ಯಕ್ಷಗಾನ ನೋಡುತ್ತಾರೆ ಎಂದರೆ ಆ ಕಲೆಯ ಮೇಲೆ ಇರುವ ಒಂದು ಆಸಕ್ತಿ ಎಷ್ಟು ಎಂದು ನೀವೇ ಆಲೋಚಿಸಿ. ಹೀಗಾಗಿ ಯಕ್ಷಗಾನದ ಚಿತ್ರ ಒಂದ ಕ್ಷಣ ಸಹಜವಾಗಿ ಬಹುತೇಕ ಯಕ್ಷ ರಸಿಕರಲ್ಲಿ, ಯಾವ ಪಾತ್ರವನ್ನು ಯಾವ ಕಲಾವಿದರು ಮಾಡಿದ್ದಾರೆ ಯಾವ ರೀತಿಯಲ್ಲಿ ಚಿತ್ರ ಮೂಡಿ ಬಂದಿದೆ ಎನ್ನುವ ಕುತೂಹಲ ಇದ್ದೇ ಇದೆ. ಈ ಕುತೂಹಲವನ್ನ ಗಮನಿಸಿರುವ ರವಿ ಬಸ್ರೂರು ಅವರು ಬಹುತೇಕ ಯಕ್ಷಗಾನ ಕಲಾವಿದರನ್ನೆ ಚಿತ್ರದ ಪಾತ್ರಧಾರಿಗಳಾಗಿ ಬಳಸುವ ಮೂಲಕ ಯಕ್ಷಕಲೆಯ ಜೊತೆಗೆ ಕಲಾವಿದರಿಗೂ ಗೌರವ ಸಲ್ಲಿಸುವ ಕೆಲಸ ಮಾಡಿದ್ದಾರೆ. ಇನ್ನು ಕರಾವಳಿಯನ್ನು ಹೊರತುಪಡಿಸಿ ಉಳಿದ ಸಿನಿಮಾ ಪ್ರಿಯರನ್ನು ಕರಾವಳಿಯ ಗಂಡು ಕಲೆಯತ್ತ ಆಕರ್ಷಿಸಬೇಕು ಎನ್ನುವ ಉದ್ದೇಶಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ವೀರ ಚಂದ್ರಹಾಸ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇನ್ನು ಉಳಿದಂತೆ ಗಾಯಕ ಚಂದನ್ ಶೆಟ್ಟಿ, ಕೆಜಿಎಫ್ ಖ್ಯಾತಿಯ ಗರುಡ ರಾಮ ಇನ್ನಿತರರು ಕೂಡ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಕರಾವಳಿಯ ಪ್ರತಿಭೆ ರವಿ ಬಸ್ರೂರು ಅವರು ಕೈ ಹಾಕಿರುವ ಈ ಸಾಹಸಕ್ಕೆ ಕರಾವಳಿಗರು ಹೇಗೆ ಸ್ಪಂದಿಸುತ್ತಾರೆ ಎನ್ನುವುದೇ ಈ ಚಿತ್ರದಷ್ಟೇ ಕುತೂಹಲ ಮೂಡಿಸಿದೆ. ಚಿತ್ರ ಏಪ್ರಿಲ್ 18ರಂದು ಚಿತ್ರಮಂದಿರಕ್ಕೆ ಲಗ್ಗೆ ಇಡಲಿದ್ದು ಯಕ್ಷಗಾನದ ಸಿನಿಮಾ ವನ್ನ ಜನ ಹೇಗೆ ಸ್ವೀಕಾರ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಈ ಹೊಸ ಪ್ರಯತ್ನ ಯಶಸ್ವಿಯಾಗಲಿ ಕರಾವಳಿಯ ಗಂಡು ಕಲೆ ರಾಜ್ಯ ರಾಷ್ಟ್ರದ ಗಡಿ ದಾಟಿ ಅಂತರಾಷ್ಟ್ರೀಯ ಮಟ್ಟದಲ್ಲೂ ಕೂಡ ಸದ್ದು ಮಾಡಲಿ ಈ ಚಿತ್ರದ ಮೂಲಕ ಯಕ್ಷ ಕಲಾವಿದರ ಸಮಸ್ಯೆಗಳಿಗೆ ನೋವುಗಳಿಗೆ ಸರಕಾರ ಧ್ವನಿಯಾಗಲಿ ಎನ್ನುವುದು ನಮ್ಮ ಆಶಯ…..