ಉಡುಪಿ : ಕೇಂದ್ರ ಸರ್ಕಾರದ ಆದೇಶದ ಅನ್ವಯ ಬೆಳಕು ಹಾಗೂ ಬುಲ್ ಟ್ರಾಲ್ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಆದರೂ ಸಹ ಜಿಲ್ಲೆಯಲ್ಲಿ ಬೆಳಕು ಮೀನುಗಾರಿಕೆಯಂತಹ ಪ್ರಕರಣಗಳು ವರದಿಯಾಗಿ, ಈ ಸಂಬಂಧ ಮಾನ್ಯ ಉಚ್ಛ ನ್ಯಾಯಾಲಯದಲ್ಲಿಯೂ ಸಹ ಪ್ರಕರಣಗಳು ದಾಖಲಾಗಿರುತ್ತದೆ. ನ್ಯಾಯಾಲಯದಿಂದ ಈ ಬಗ್ಗೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ನಿರ್ದೇಶನ ನೀಡಲಾಗಿರುತ್ತದೆ. ಆದ್ದರಿಂದ ನ್ಯಾಯಾಲಯದ ಹಾಗೂ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಜಿಲ್ಲೆಯಲ್ಲಿ ಬೆಳಕು ಮೀನುಗಾರಿಕೆ ಹಾಗೂ ಬುಲ್ ಟ್ರಾಲ್ ಮೀನುಗಾರಿಕೆಯಲ್ಲಿ ತೊಡಗುವ ದೋಣಿಗಳ ಮೀನುಗಾರಿಕೆ ಪರವಾನಿಗೆ ಹಾಗೂ ದೋಣಿ ನೋಂದಣಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ, ಅಂತಹ ದೋಣಿಗಳಿಗೆ ಡೀಸೆಲ್ ವಿತರಣೆಯನ್ನು ನಿಲ್ಲಿಸಲಾಗುವುದು. ಇಂತಹ ಪ್ರಕರಣಗಳು ಪುನರಾವರ್ತಿಸಿದ್ದಲ್ಲಿ ಶಾಶ್ವತವಾಗಿ ಅಂತಹ ದೋಣಿಗಳ ನೋಂದಣಿಯನ್ನು ರದ್ದುಗೊಳಿಸಲು ಕ್ರಮ ಜರುಗಿಸಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.