ಉಡುಪಿ : ಜಿಲ್ಲೆಯಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಿದ್ದು, ಇವುಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿವೆ ಇವುಗಳ ನಿಯಂತ್ರಣಕ್ಕೆ ಅಗತ್ಯ ಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ದಿನೇದಿನೇ ನಾಯಿಗಳ ಸಂಖ್ಯೆ ಹೆಚ್ಚುತ್ತಿವೆ. ರಾತ್ರಿ ಸಮಯದಲ್ಲಿ ರೈಲು ಮತ್ತು ಬಸ್ಸಿನಲ್ಲಿ ಪ್ರಯಾಣಿಸಿ ಬಂದಂತಹ ಸಾರ್ವಜನಿಕರ ಮೇಲೆ ಎರಗುತ್ತವೆ ಎಂಬ ದೂರುಗಳು ಕೇಳಿ ಬರುತ್ತಿವೆ. ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಸಂತಾನ ಹರಣ ಶಸ್ತ್ರ ಚಿಕಿತ್ಸೆಯೇ ಮಾರ್ಗವಾಗಿದ್ದು ನಗರ ಹಾಗೂ ಗ್ರಾಮೀಣ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳು ಪ್ರತಿ ವರ್ಷವೂ ಹಣಕಾಸು ಹಂಚಿಕೆ ಮಾಡಿಕೊಳ್ಳುವುದರೊಂದಿಗೆ ಅವುಗಳ ಸಂತಾನ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.

ಎಬಿಸಿ ಕಾರ್ಯಕ್ರಮವನ್ನು ಕೈಗೊಳ್ಳಲು ಸ್ಥಳೀಯ ಸಂಸ್ಥೆಗಳು ಸ್ವಚ್ಚ ಹಾಗೂ ನೈರ್ಮಲ್ಯತೆ ಇರುವ ಶಸ್ತ್ರ ಚಿಕಿತ್ಸಾ ಕೊಠಡಿ, ಅವಶ್ಯ ಪ್ರಮಾಣದ ಕೆನೆಲ್ ಗಳು ನಾಯಿಗಳನ್ನು ವೈಜ್ಞಾನಿಕವಾಗಿ ಹಿಡಿಯುವ ವ್ಯವಸ್ಥೆ, ಶಸ್ತ್ರ ಚಿಕಿತ್ಸಾ ಕ್ರಮದ ನಂತರ ಅವುಗಳನ್ನು ನಾಲ್ಕು ದಿನಗಳ ಕಾಲ ಆರೈಕೆಗೆ ವ್ಯವಸ್ಥೆ, ನುರಿತ ಶಸ್ತ್ರ ಚಿಕಿತ್ಸಾ ತಜ್ಞರು ಹಾಗೂ ಸಿಬ್ಬಂದಿಗಳನ್ನು ನಿಯೋಜನೆಯೊಂದಿಗೆ ಅಥವಾ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಪ್ರಾಣಿ ಕಲ್ಯಾಣ ಸಂಸ್ಥೆಯ ಗುತ್ತಿಗೆ ನೀಡುವುದರೊಂದಿಗೆ ಅನುಷ್ಠಾನಗೊಳಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಎಂ.ಸಿ ರೆಡ್ಡಪ್ಪ, ನಗರಸಭೆ ಮಹಾಂತೇಶ್ ಹಂಗರಗಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

2024-25ಸಾಲಿನಲ್ಲಿ ಎಬಿಸಿ ಕಾರ್ಯಕ್ರಮದ ಅನ್ವಯ ಜಿಲ್ಲೆಯಲ್ಲಿ 534 ಗಂಡು ಹಾಗೂ 1220 ಹೆಣ್ಣು ಸೇರಿದಂತೆ ಒಟ್ಟು 1754 ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಆಗಸ್ಟ್ ವರೆಗೆ 183 ಗಂಡು, 558 ಹೆಣ್ಣು ಸೇರಿದಂತೆ 771 ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದ ಅವರು, ಪ್ರಸಕ್ತ ಸಾಲಿನ ಕೊನೆಯ ಒಳಗಾಗಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕಾರ್ಯವನ್ನು ಹೆಚ್ಚಿಸಬೇಕು.
ಸ್ವರೂಪ ಟಿ.ಕೆ ( ಜಿಲ್ಲಾಧಿಕಾರಿ)


