ಉಡುಪಿ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬೀಡಿ ಕಾರ್ಮಿಕರ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ, ಎರಡೂ ಜಿಲ್ಲೆಗಳ ಬೀಡಿ ಕಾರ್ಮಿಕರ ಸಂಘಗಳ ಜಂಟಿ ಕ್ರೀಯಾ ಸಮಿತಿಯ ನೇತೃತ್ವದಲ್ಲಿ 17ರವರೆಗೆ ಹಕ್ಕೊತ್ತಾಯ ಚಳುವಳಿಗೆ ಕರೆ ನೀಡಲಾಗಿದ್ದು, ಉಡುಪಿಯ ಭಾರತ್ ಬೀಡಿ ಕಂಪನಿಯ ಮುಂದೆ ಪ್ರತಿಭಟನೆ ನಡೆಯಿತು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ ಮಾತನಾಡಿ, ಬೀಡಿ ಕಾರ್ಮಿಕರ ಹಕ್ಕುಗಳ ಹೋರಾಟ ನ್ಯಾಯಸಮ್ಮತವಾಗಿದ್ದು, ಕಂಪನಿಗಳು ಹಾಗೂ ಸರ್ಕಾರ ಈ ಬೇಡಿಕೆಗಳ ಕುರಿತು ತಕ್ಷಣ ಸ್ಪಂದಿಸಬೇಕೆಂದು ಒತ್ತಾಯಿಸಿದರು. ನೂರಾರು ಬೀಡಿ ಕಾರ್ಮಿಕರು ಭಾಗವಹಿಸಿ, 2018ರಿಂದ 2024ರವರೆಗೆ ಬಾಕಿ ಉಳಿದಿರುವ ಕನಿಷ್ಠ ಕೂಲಿ ರೂ.40 ಹಾಗೂ ತುಟ್ಟಿ ಭತ್ಯೆ ತಕ್ಷಣ ಬಿಡುಗಡೆ ಮಾಡಲು ಸಂಸ್ಥೆಯ ಆಡಳಿತದ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನಾ ಸಭೆಯಲ್ಲಿ ಎಐಟಿಯುಸಿ ಬೀಡಿ ಸಂಘದ ಕೋಶಾಧಿಕಾರಿ ವಿ. ಶೇಖರ್, ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಅಧ್ಯಕ್ಷ ಮಹಾಬಲ ಹೊಡೆಯರ ಹೋಬಳಿ, ಸಿಐಟಿಯು ಉಡುಪಿ ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ, ಮೋಹನ್, ಬೀಡಿ ಫೆಡರೇಶನ್ ಮುಖಂಡರು ಬಲ್ಕೀಸ್, ನಳಿನಿ ಎಸ್., ಗಿರಿಜ, ಹಾಗೂ ಎಐಟಿಯುಸಿ ಸಂಘದ ಮುಖಂಡರು ಶಶಿಕಲಾ, ಮಮತಾ ಉಪಸ್ಥಿತರಿದ್ದರು.

ಬೀಡಿ ಫೆಡರೇಶನ್ ಕಾರ್ಯದರ್ಶಿ ಉಮೇಶ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಕೋಶಾಧಿಕಾರಿ ಕವಿರಾಜ್ ಎಸ್. ಕಾಂಚನ್ ವಂದಿಸಿದರು.
