ಉಡುಪಿ: ಚುನಾವಣಾ ಪೂರ್ವದಲ್ಲಿ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಕಾಂಗ್ರೆಸ್ ಸರಕಾರ ದಿನನಿತ್ಯ ಬಳಕೆಯ ವಸ್ತುಗಳ ಮೇಲೆ ಬೆಲೆ ಏರಿಸುತ್ತಿದೆ. ಇದರ ವಿರುದ್ದ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂಧ್ರ ಅವರ ಸಾರಥ್ಯದ ಜನಾಕ್ರೋಶ ಯಾತ್ರೆಯೂ ಎ.10 ಜಿಲ್ಲೆಗೆ ಆಗಮಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ಬಿ.ವೈ ವಿಜಯೇಂಧ್ರ ಚಾಲನೆ ನೀಡಲಿದ್ದಾರೆ. ನಂತರ ಕಲ್ಸಂಕ, ಕಡಿಯಾಳಿ ಮಾರ್ಗವಾಗಿ ಬಿಜೆಪಿ ಕಚೇರಿಯ ಹಿಂಭಾಗದ ಮೈದಾನದವರೆಗೆ ಪ್ರತಿಭಟನಾ ಜಾಥಾ ಸಾಗಲಿದ್ದು, ಅಲ್ಲಿ ಸಮಾವೇಶ ನಡೆಯಲಿದೆ ಎಂದರು.
ಜಾಥಾದಲ್ಲಿ ವಿವಿಧ ಮೋರ್ಚಾ, ಮಂಡಲಗಳಿಂದ ವಿನೂತನ ಟ್ಯಾಬ್ಲೋ ನಿರ್ಮಿಸಿ ಪ್ರತಿಭಟನೆ ನಡೆಸಲಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ರಾಜ್ಯದ ಪ್ರಮುಖರ ತಂಡ ಪಾಲ್ಗೊಳಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕರುಗಳಾದ ಯಶ್ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಜಿ.ಪ್ರ.ಕಾರ್ಯದರ್ಶಿ ರೇಶ್ಮಾ ಶೆಟ್ಟಿ, ರಾಘವೇಂದ್ರ ಕಿಣಿ, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು.