ಉಡುಪಿ: ಎರಡು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಸೌಜನ್ಯ ಪರ ಹೋರಾಟ ಸೂತ್ರಧಾರ, ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ತಿಮರೋಡಿ ಅವರನ್ನು ಅವರ ಮನೆಯಿಂದಲೇ ಬ್ರಹ್ಮಾವರ ಪೊಲೀಸ್ ರು ಬಂಧಿಸಿದ್ದರು.

ಬೆಳಗ್ಗಿನ ಕಲಾಪದಲ್ಲಿ ಪ್ರಕರಣದಲ್ಲಿ ದೂರುದಾರ ರಾಜೀವ್ ಕುಲಾಲ್ ಅವರ ಪರವಾಗಿ ಅಭಿಯೋಜನೆಗೆ ಸಹಕರಿಸಲು ಅವಕಾಶ ಕಲ್ಪಿಸುವಂತೆ ಮಂಗಳೂರಿನ ಹಿರಿಯ ನ್ಯಾಯವಾದಿ ಶಂಭು ಶರ್ಮ ವಕಾಲತ್ತು ಸಲ್ಲಿಸಿದರು. ಇದಕ್ಕೆ ಆರೋಪಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದರು. ಇನ್ನು ತನಿಖಾಧಿಕಾರಿ ಅಶೋಕ್ ಮಾಲಭಾಗಿ ನ್ಯಾಯಾಲಯಕ್ಕೆ ಹಾಜರಾಗಿ, ಆರೋಪಿಯನ್ನು ಪೋಲಿಸ್ ಕಸ್ಟಡಿಗೆ ನೀಡುವಂತೆ ಕೋರಿದರು. ಈ ವೇಳೆ ಆರೋಪಿಯನ್ನು 1 ಗಂಟೆಯ ಅವಧಿಯೊಳಗಾಗಿ ನ್ಯಾಯಾಲಯ ಹಾಜರು ಪಡಿಸುವಂತೆ ಸೂಚಿಸಿದರು. ನಂತರ ಬ್ರಹ್ಮಾವರ ಸಿಪಿಐ ಗೋಪಿಕೃಷ್ಣ, ಪಿಎಸ್‌ಐ ಅಶೋಕ್ ಮಾಲಭಾಗಿ ಅವರ ನೇತೃತ್ವದಲ್ಲಿ ಬಿಗಿ ಪೋಲಿಸ್ ಭದ್ರತೆಯೊಂದಿಗೆ ಮಧ್ಯಾಹ್ನ ಸುಮಾರು 1.30 ಕ್ಕೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನಂತರ ಪೋಲಿಸರು ಅವರನ್ನು ಉಡುಪಿ ನಗರಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದರು.

ಆರೋಪಿ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಪೋಲಿಸ್ ಕಸ್ಟಡಿಗೆ ನೀಡುವಂತೆ ಪಿಎಸ್ಐ ಕೇಳಿದರು. ನ್ಯಾಯಧೀಶರು ಎರಡು ಗಂಟೆ ಪೋಲಿಸ್ ಕಸ್ಟಡಿಗೆ ನೀಡಿ ಆದೇಶಿಸಿದರು. ಆಗ ಪಿಎಸ್ಐ ಮಹಜರು ಪ್ರಕ್ರಿಯೆಗೆ ಸಮಯಾವಕಾಶ ಕೇಳಿದಾಗ, ನ್ಯಾಯಾಧೀಶರು, ಪಿಎಸ್‌ಐ ಅವರನ್ನು ಬಂಧನದ ದಿನವೇ ಯಾಕೆ ಪೋಲಿಸ್ ಕಸ್ಟಡಿಗೆ ಕೇಳಿಲ್ಲ..? ನಿನ್ನೆಯೂ ಯಾಕೆ ಕೇಳಿಲ್ಲ..? ಬೆಳಗ್ಗಿನ ಕಲಾಪಕ್ಕೂ ತಡವಾಗಿ ಬಂದಿದ್ದೀರಿ..? ನಿಮ್ಮಿಂದ ನೂನ್ಯತೆಗಳಾಗಿವೆ ಎಂದು ತರಾಟೆಗೆ ತೆಗೆದುಕೊಂಡು, 3.40 ಕ್ಕೆ ಹಾಜರುಪಡಿಸುವಂತೆ ಮೌಖಿಕವಾಗಿ ತಿಳಿಸಿದ್ದು, 4.40 ರವರೆಗೆ ಅವಕಾಶ ಕಲ್ಪಿಸಿದರು

ಶನಿವಾರ ಮಧ್ಯಾಹ್ನದ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಪೊಲೀಸ್ ರು ಉಡುಪಿ ಸೆಷನ್ ಕೋರ್ಟ್ ಗೆ ಹಾಜರುಪಡಿಸಿದರು. ಮಧ್ಯಾಹ್ನದ ಕಲಾಪದಲ್ಲಿ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿಯವರು ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಆಕ್ಷೇಪಣೆ ಸಲ್ಲಿಸಿದರು. ನಂತರ ಆರೋಪಿಯ ಪರ ವಕೀಲ ವಿಜಯ್ ವಾಸು ಪೂಜಾರಿಯವರು ವಾದ ಮಂಡಿಸಿ, ನನ್ನ ಕಕ್ಷಿದಾರ ಹಿಂದೂ ಮುಖಂಡರಾಗಿದ್ದು, ಅನ್ಯಧರ್ಮದ ಬಗ್ಗೆ ಮಾತನಾಡಿಲ್ಲ. ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ದಾರೆ. ಇವರ ವಿರುದ್ದ ದಾಖಲಾದ ಸೆಕ್ಷನ್‌ಗಳು ಸಾರ್ವಜನಿಕ ಶಾಂತಿ ಭಂಗಕ್ಕೆ ಅನ್ವಯಿಸುವುದು. ಈ ಘಟನೆಗೆ ಅನ್ವಯಿಸುವುದಿಲ್ಲ. ಈ ವಿಡಿಯೋದಿಂದ ರಾಜ್ಯದ ಎಲ್ಲಿಯೂ ಶಾಂತಿಭಂಗ ಉಂಟಾಗಿಲ್ಲ ಎಂದು ವಾದಿಸಿದರು. 339(2) ಬಿಎನ್‌ಎಸ್ಎಸ್ ಅಡಿಯಲ್ಲಿ ದೂರುದಾರರ ಪರವಾಗಿ ವಾದಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ನ್ಯಾಯಧೀಶರು ಈ ಬಗ್ಗೆ ಸುದೀರ್ಘವಾದ ಚರ್ಚೆ ನಡೆಯಬೇಕಿದೆ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಚರ್ಚಿಸುವ ಎಂದರು. ಆಗ ವಕೀಲರು ಈ ವಕಾಲತ್ತಿನ ಬಗ್ಗೆ ಅಂತಿಮಗೊಳ್ಳುವವರೆಗೆ ಆರೋಪಿಯ ಜಾಮೀನು ಅರ್ಜಿ ವಿಚಾರಣೆಯನ್ನು ನಡೆಸಬಾರದು ಎಂದು ಕೋರಿದರು. ಕೊನೆಯಲ್ಲಿ ವಾದ ಆಲಿಸಿದ ಉಡುಪಿ ಜಿಲ್ಲಾ ಪ್ರಥಮದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದ ನ್ಯಾಯಾಧೀಶ ನಾಗೇಶ್ ಎನ್. ಎ ತಿಮರೋಡಿ ಅವರಿಗೆ ಜಾಮೀನು ಮಂಜೂರುಗೊಳಿಸಿದ ನ್ಯಾಯಾಲಯವು ಆರೋಪಿಗೆ ಸಾಮಾಜಿಕ ಸ್ವಾಸ್ಥ್ಯ ಕೆಡಿಸಬೇಡಿ ಎಂದು ಸೂಚಿಸಿದರು.

ಕೋರ್ಟ್ ವಿಚಾರಣೆ ಹಿನ್ನಲೆಯಲ್ಲಿ ತಿಮರೋಡಿ ಅವರ ಬೆಂಬಲಿಗರು, ಪ್ರಕರಣ ಕುರಿತು ಆಸಕ್ತಿ ಇರುವ ಸಾರ್ವಜನಿಕರು ವಿಶೇಷವಾಗಿ ಕೋರ್ಟ್ ಮುಂಭಾಗದಲ್ಲಿ ನೆರೆದಿದ್ದರು.