ಉಡುಪಿ : ಬಿಜೆಪಿ ಪಕ್ಷದವರು ಭ್ರಷ್ಟಾಚಾರಿಗಳನ್ನು ವಾಶೀಂಗ್ ಮೇಶಿನ್ ನಲ್ಲಿ ಹಾಕಿ, ನಿರ್ಮಾ ಹಾಕಿ ತೊಳೆಯುತ್ತಾರೆ. ಹೀಗಾಗಿ ಬಿಜೆಪಿ ಸೇರಿದ ಭ್ರಷ್ಟರೆಲ್ಲಾ ಪ್ರಾಮಾಣಿಕರಾಗಿ ಬಿಡುತ್ತಾರೆ. ಇದೇ ರೀತಿ 25 ರಾಜಕಾರಣಿಗಳನ್ನು ಬಿಜೆಪಿ ಈ ರೀತಿ ಮಾಡಿದೆ ಎಂದು ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಿಜೆಪಿಯ ಕಾಲೇಳೆದಿದ್ದಾರೆ.

ರಾಜ್ಯ ಕಾರ್ಮಿಕ ಸಚಿವರು ಇಂದು ಉಡುಪಿಗೆ ಭೇಟಿ ನೀಡಿದ ವೇಳೆ, ಮಾಧ್ಯಮ ಮಿತ್ರ ಜೊತೆ ಮಾತನಾಡುವಾಗ, ಕಾಂಗ್ರೆಸ್ ಶಾಸಕ ಪಪ್ಪಿ ಮನೆ ಮೇಲೆ ಇಡಿ ಧಾಳಿ ಪ್ರತಿಕ್ರಿಯಿಸುವಂತೆ ಕೇಳಿದಾಗ ಮಾತನಾಡುತ್ತಾ, ಮಹಾರಾಷ್ಟದ ಅಜಿತ್ ಪವರ್ ಮೇಲೆ 60 ಸಾವಿರ ಕೋಟಿ ಆರೋಪ ಇತ್ತು. ಅವರನ್ನು ಬಿಜೆಪಿಗೆ ಕರೆದುಕೊಂಡು ಬಂದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಮೇಲೂ ಆರೋಪ ಇತ್ತು. ಇಬ್ಬರೂ ಕೂಡ ಬಿಜೆಪಿಗೆ ಹಣ ಕೊಟ್ಟು ಸೇರ್ಪಡೆಯಾದರು. ಪಪ್ಪಿ ಬಿಹಾರ ಚುನಾವಣೆಗೆ ದುಡ್ಡು ಕೊಟ್ಟಿಲ್ಲ. ಯಾರು ದುಡ್ಡು ಕೊಡುತ್ತಾರೋ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ. ಇಡೀ ಮಹಾರಾಷ್ಟ್ರ ಚುನಾವಣೆಗೆ ಅಜಿತ್ ಪವಾರ್ ಹಣ ಕೊಟ್ಟಿದ್ದಾರೆ. ಬಿಜೆಪಿಯವರೇ ಅಜಿತ್ ಪವಾರ್ ವಿರುದ್ಧ ಆರೋಪಗಳನ್ನು ಮಾಡಿದ್ದರು. ಭ್ರಷ್ಟಾಚಾರ ರ‍್ಯಾಂಕಿಂಗ್‌ನಲ್ಲಿ ದೇಶ ಯಾವ ಸ್ಥಾನದಲ್ಲಿದೆ ನೋಡಿ. ಹಸಿವಿನ ಸೂಚ್ಯಂಕ, ಬಡತನದ ಸೂಚ್ಯಂಕ, ವಾಕ್ ಸ್ವಾತಂತ್ರ್ಯ, ಜಿಡಿಪಿ, ಪಾಸ್ ಪೋರ್ಟ್ ರ‍್ಯಾಂಕಿಂಗ್‌ಗಳಲ್ಲಿ ಭಾರತ ಎಲ್ಲಿದ್ದೇವೆ ನೋಡಿ ಎಂದರು.

ಸಚಿವ ಸಂಪುಟ ವಿಸ್ತರಣೆ ಹಾಗೂ ಔತಣ ಕೂಟ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಿ ವರ್ಷ ಔತಣಕೂಟ ಕರೆಯಲಾಗುತ್ತದೆ. ಇದೇನು ಹೊಸತಲ್ಲ. ಮಂತ್ರಿಮಂಡಲ ವಿಸ್ತರಣೆ ಅಥವಾ ಪುನರ್ ರಚನೆ ಆಗುವುದು ಸಹಜ ಪ್ರಕ್ರಿಯೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಗಳು, ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದರು. ಇತ್ತೀಚೆಗೆ ಬಿಗ್ ಬಾಸ್ ನಡೆಯುವ ಸ್ಟುಡಿಯೋಗೆ ಬೀಗ ಹಾಕಿದ ವಿಚಾರವನ್ನು ಕೇಳಿದಾಗ, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಅಲ್ಲಿ ಪರಿಸರ ಕ್ಲೀಯರೇನ್ಸ್ ಇರಲಿಲ್ಲ. ಉಪಮುಖ್ಯಮಂತ್ರಿಗಳು ಒಂದು ವ್ಯವಸ್ಥೆಗೆ ತಂದಿದ್ದಾರೆ. ಉದ್ದೇಶ ಪೂರ್ವಕವಾಗಿ ನಾವು ಬಿಗ್‌ಬಾಸ್ ನಿಲ್ಲಿಸುವ ಅವಶ್ಯಕತೆ ಇಲ್ಲ. ನೋಟಿಸುಗಳನ್ನು ಕೊಟ್ಟಿರುತ್ತಾರೆ. ಡಿಕೆಶಿ ಮುಂದಾಳತ್ವದಲ್ಲಿ ಸಮಾಧಾನ ಮಾಡಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಗಣತಿ ಶೇ.80ರಷ್ಟು ಪೂರ್ಣ ಗೊಂಡಿದೆ. ಇದು ಜಾತಿ ಗಣತಿ ಅಲ್ಲ. ಸಿದ್ದರಾಮಯ್ಯ ಅಥವಾ ಸರಕಾರ ಸಮಾಜವನ್ನು ಒಡೆದಿಲ್ಲ. ಕೇಂದ್ರ ಸರಕಾರವು ಗಣತಿ ಮಾಡಲು ಹೊರಟಿದೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ಕೊಟ್ಟಿದೆ. ಇದರ ವಿರುದ್ಧ ಯಾರಾದರೂ ಪ್ರತಿಭಟನೆ ಹೋರಾಟ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಕರ್ನಾಟಕದಲ್ಲಿ ಮಹಿಳೆಯರಿಗೆ ಒಂದು ವರ್ಷದಲ್ಲಿ 12 ದಿನಗಳ ಮುಟ್ಟಿನ ರಜೆ ನೀಡಲು ರಾಜ್ಯ ಸರಕಾರ ನಿರ್ಧಾರ ಕೈಗೊಂಡಿದ್ದು, ಇದೊಂದು ಪ್ರಗತಿಪರ ಮಸೂದೆಯಾಗಿದೆ ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಸೈಕಲ್ ಮೂಲಕ ಜಾಗೃತಿ ಮೂಡಿಸುವ ಒರಿಸ್ಸಾದ ರಂಜಿತಾ ಪ್ರಿಯ ದರ್ಶಿನಿ ನನ್ನನ್ನು ಕವಿತಾ ರೆಡ್ಡಿಯವರ ಜೊತೆ ಬಂದು ಭೇಟಿಯಾಗಿದ್ದರು. ಅವರೇ ವರ್ಷದ ಹಿಂದೆ ಈ ಬಗ್ಗೆ ಪ್ರಸ್ತಾಪ ಸಲ್ಲಿಸಿದ್ದರು. ಇದೀಗ ಕರ್ನಾಟಕ ಸರಕಾರ ಒಮ್ಮತದಿಂದ ನಿರ್ಧಾರ ಕೈಗೊಂಡಿದೆ ಎಂದರು. ಇದರಿಂದ ಮಧ್ಯಮ ಬಡ ಮಾಧ್ಯಮ ವರ್ಗದ ಬಹಳಷ್ಟು ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿದೆ. ಗಾರ್ಮೆಂಟ್ ಇಂಡಸ್ಟ್ರಿ ಸೇರಿದಂತೆ, ಸಣ್ಣ ಪುಟ್ಟ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಅನುಕೂಲವಾಗಲಿದೆ. ಮುಟ್ಟಿನ ಸಮಸ್ಯೆಯಿಂದ ಅನೇಕ ಮಂದಿ ಮಹಿಳೆಯರು ಬಳಲುತ್ತಿದ್ದು, ಇದಕ್ಕಾಗಿ ಸಮಿತಿ ರಚನೆ ಮಾಡಲಾಗಿತ್ತು. ಆ ಮೂಲಕ ರಾಜ್ಯಾದ್ಯಂತ ಜನರ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಬುದ್ಧ ಬಸವ ಅಂಬೇಡ್ಕರ್ ಸಿದ್ಧಾಂತದ ಕಾಂಗ್ರೆಸ್ ಸರಕಾರ ಈ ನಿರ್ಧಾರ ಕೈಗೊಂಡಿದೆ. ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ ಎಂದರು.