ಉಡುಪಿ ಜಿಲ್ಲೆಯ ಅಗ್ನಿಶಾಮಕ ಸಿಬ್ಬಂದಿಗಳು ಜೀವದ ಹಂಗು ತೊರೆದು ಬಾವಿಗೆ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ನಗರದ ಸಗ್ರಿ ನಿವಾಸಿಯಾದ ಜಯಕರ ನಾಯ್ಕ್ (59) ಎಂಬವರು ತಮ್ಮ ಮನೆಯ ಬಾವಿಯಲ್ಲಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಉಡುಪಿ ಜಿಲ್ಲಾ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಜಯಕರ ನಾಯ್ಕ್ ಅವರಿಗೆ ವಿಪರೀತ ಮದ್ಯಪಾನದ ಚಟವಿದ್ದು, ಕಾಲು ಜಾರಿ ಬಾವಿಗೆ ಬಿದ್ದಿರಬಹುದೆಂಬ ಅಥವಾ ತಾವೇ ಹಾರಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಬಾವಿಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿಗಳು ಸುಮಾರು ಅರ್ಧಗಂಟೆ ಕಾಲ ಹರಸಾಹಸಪಟ್ಟರು.

ಕೊನೆಗೆ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳು ಜಯಕರ ನಾಯ್ಕ್ ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸಿದರು. ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿ ನೆರವೇರಿದ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂದಿಗಳ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ರಕ್ಷಿಸಲ್ಪಟ್ಟ ಜಯಕರ ನಾಯ್ಕ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.



