ಉಡುಪಿ : ಹಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಂಗಾರಕಟ್ಟೆ ಬಾಳೆಕುದ್ರು ಶ್ರೀ ನೃಸಿಂಹಾಶ್ರಮ ಸ್ವಾಮೀಜಿ (55) ಇಂದು ಬ್ರಹ್ಮೈಕ್ಯರಾಗಿದ್ದಾರೆ. ಋಷಿ ಸಂಸ್ಕೃತಿಯ ಜೊತೆಗೆ ಕೃಷಿ ಸಂಸ್ಕೃತಿಗೆ ನಾಂದಿ ಹಾಡಿದ್ದ ಶ್ರೀಗಳು ಮೊದಲಿನಿಂದಲೂ ಕೃಷಿಗೆ ಹೆಚ್ಚಿನ ಒತ್ತು ನೀಡಿದವರು, ಹೀಗಾಗಿ ಮಠದ ವ್ಯಾಪ್ತಿಯಲ್ಲಿದ್ದ 5 ಎಕರೆ ಜಾಗದಲ್ಲಿ ಬೇಸಾಯ ಮಾಡಿಸುತ್ತಾ ಇದ್ದವರು. ಇತ್ತೀಚಿನ ಕೆಲವು ವರ್ಷಗಳಿಂದ ತೀವ್ರ ಆನಾರೋಗ್ಯದಿಂದ ಜರ್ಜರಿತರಾಗಿದ್ದ ಶ್ರೀಗಳು ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ತೆಗೆದುಕೊಳ್ಳುತ್ತಿದ್ದರು. ಶುಕ್ರವಾರದಂದು ಬೆಳಗ್ಗೆ ಡಯಾಲಿಸಿಸ್ ಗೆಂದು ಕರೆದುಕೊಂಡು ಹೋಗುವಾಗ ಬ್ರಹ್ಮಾವರದ ಬಳಿ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಅವರನ್ನು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದಾರಿಮಧ್ಯದಲ್ಲೇ ದೈವಾಧೀನರಾದರು.

ಬಾಳೆಕುದ್ರು ಶ್ರೀಮಠಕ್ಕೆ ಅನಾದಿಕಾಲದಿಂದಲೂ ಪೀಠಾಧಿಪತಿಗಳನ್ನು ನಿಯುಕ್ತಿ ಮಾಡುವುದು ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದ ಜಗದ್ಗುರುಗಳ ನಿರ್ದೇಶನ ಮತ್ತು ಮಾರ್ಗದರ್ಶನದಲ್ಲಿ. 2006ರಲ್ಲಿ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರನ್ನೂ ಶೃಂಗೇರಿ ಶ್ರೀಮಠದ ಗುರುವರ್ಯರ ಮಾರ್ಗದರ್ಶನದಲ್ಲಿಯೇ ನಿಯುಕ್ತಿಗೊಳಿಸಿ, ಪಟ್ಟಾಭಿಷೇಕ ಮಾಡಲಾಗಿತ್ತು. ಅದ್ವೈತ ಭಾಗವತ ಸಂಪ್ರದಾಯ ಅನುಸರಿಸುತ್ತಿರುವ ಶಿವಳ್ಳಿ ಸ್ಮಾರ್ತ ಬ್ರಾಹ್ಮಣರ ಗುರುಮಠವಾಗಿರುವ ಬಾಳೆಕುದ್ರು ಶ್ರೀಮಠ, ಕರಾವಳಿ ಜಿಲ್ಲೆಗಳು ಮತ್ತು ಘಟ್ಟದ ಮೇಲೆ ಅಪಾರ ಶಿಷ್ಯ ಸಮುದಾಯ ಹೊಂದಿ, ಶ್ರೇಷ್ಠ ಪರಂಪರೆ ಹೊಂದಿರುವ ಮಠ ಎಂದು ಹೆಸರು ಮಾಡಿದೆ. ಮಠದ ಉತ್ತರಾಧಿಕಾರಿಯಾಗಿ ಕಳೆದ ವರ್ಷ ಶಿಷ್ಯ ಪಟ್ಟವನ್ನು ಬಾಳೆಕುದ್ರು ವಾಸುದೇವ ಸ್ವಾಮೀಜಿಯವರಿಗೆ ನೀಡಿದ್ದರು.

ಬಾಳೆಕುದ್ರು ಮಠದಲ್ಲಿ ಭಕ್ತರಿಗೆ ಶ್ರೀಗಳ ಅಂತಿಮ ದರ್ಶನಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಸಂಜೆ ಬಳಿಕ ಕಿರಿಯ ಶ್ರೀಗಳಾದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿಗಳ ಮೂಲಕ ವಿಧಿವಿಧಾನಗಳು ನೆರವೇರಲಿದೆ ಎನ್ನಲಾಗಿದೆ.