ಉಡುಪಿ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುತ್ತಿರುವ ಭೀಕರ ದೌರ್ಜನ್ಯಗಳು ತೀವ್ರ ಆಘಾತ ಉಂಟುಮಾಡುತ್ತಿವೆ. ಈ ಭೀಭತ್ಸ ಕೃತ್ಯಗಳನ್ನು ತಕ್ಷಣವೇ ನಿಲ್ಲಿಸಲು ಕೇಂದ್ರ ಸರ್ಕಾರ ವಿಳಂಬ ಮಾಡದೆ ಕ್ರಮವಹಿಸಬೇಕು ಎಂದು ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ನರೇಂದ್ರ ಮೋದಿ ಅವರಿಗೆ ಶ್ರೀಗಳು ಪತ್ರ ಬರೆದಿದ್ದು, ಅದರ ಸಾರಾಂಶವನ್ನು ಪ್ರಕಟಿಸಿದ್ದಾರೆ. ಜಗತ್ತಿನ ಒಳಿತಿಗಾಗಿ ಹಿಂದು ಸಮಾಜ ಸದಾ ಶಾಂತಿ ಮತ್ತು ಸಹಬಾಳ್ವೆಯ ತತ್ವಗಳನ್ನು ಅನುಸರಿಸಿಕೊಂಡು ಬಂದಿದೆ. ಇತರರ ಮೇಲೆ ಪಾರಮ್ಯ ಸಾಧಿಸಲು ಹಿಂಸೆಯನ್ನು ಹಿಂದು ಸಮಾಜ ಎಂದಿಗೂ ಅಸ್ತ್ರವಾಗಿಸಿಕೊಂಡಿಲ್ಲ. ಆದರೆ ನೆರೆಯ ದೇಶ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸೆ, ಕೊಲೆ, ಅತ್ಯಾಚಾರಗಳು ಭಾರತೀಯ ಹಿಂದುಗಳನ್ನು ತೀವ್ರ ದುಃಖಕ್ಕೆ ದೂಡಿವೆ ಎಂದು ಅವರು ತಿಳಿಸಿದ್ದಾರೆ.

ರಾಜತಾಂತ್ರಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾರಿಗೆ ಭಾರತ ಆಶ್ರಯ ನೀಡಿ ರಕ್ಷಣೆ ನೀಡಿದ್ದು ದೇಶದ ಔದಾರ್ಯದ ಪ್ರತೀಕ. ಆದರೆ ಆ ಬಳಿಕ ಅಲ್ಲಿನ ಹಿಂದುಗಳು ಅನುಭವಿಸುತ್ತಿರುವ ನೋವು–ಸಂಕಟಗಳು ಅತ್ಯಂತ ವಿಷಾದನೀಯವಾಗಿವೆ. ಹೀಗಾಗಿ ಬಾಂಗ್ಲಾದೇಶದಲ್ಲಿ ಹಿಂದುಗಳ ರಕ್ಷಣೆ ಹಾಗೂ ನೆಮ್ಮದಿಗಾಗಿ ಸಾಧ್ಯವಿರುವ ಎಲ್ಲ ರಾಜತಾಂತ್ರಿಕ ಕ್ರಮಗಳನ್ನು ಕೇಂದ್ರ ಸರ್ಕಾರ ತಕ್ಷಣ ಕೈಗೊಳ್ಳಬೇಕು ಎಂದು, ವಿಶ್ವ ಹಿಂದು ಪರಿಷತ್ತಿನ ಕೇಂದ್ರೀಯ ಮಂಡಳಿ ಸದಸ್ಯರೂ ಆಗಿರುವ ಶ್ರೀಗಳು ಮನವಿ ಮಾಡಿದ್ದಾರೆ.

ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಮಾರಣಾಂತಿಕ ದೌರ್ಜನ್ಯಗಳ ಅಂತ್ಯ, ಘಟನೆಯಲ್ಲಿ ಮೃತರಾದವರಿಗೆ ಸದ್ಗತಿ ಮತ್ತು ಸಂತ್ರಸ್ತರಿಗೆ ಶೀಘ್ರ ರಕ್ಷಣೆ ದೊರಕುವಂತೆ, ಜೊತೆಗೆ ಇಡೀ ಜಗತ್ತಿನಲ್ಲಿ ಶಾಂತಿ–ನೆಮ್ಮದಿ ನೆಲೆಸುವಂತೆ ಪ್ರಾರ್ಥಿಸಲು ಜನವರಿ 10 (ಶನಿವಾರ)ರಂದು ದೇಶದ ಪ್ರತಿಯೊಬ್ಬ ಹಿಂದು ತಮ್ಮ ಮನೆ, ಮಠ, ಮಂದಿರಗಳಲ್ಲಿ ನಿತ್ಯದ ದೀಪದೊಂದಿಗೆ ಹೆಚ್ಚುವರಿ ದೀಪವೊಂದನ್ನು ಬೆಳಗಿಸಬೇಕೆಂದು ಶ್ರೀಗಳು ಕರೆ ನೀಡಿದ್ದಾರೆ.



