ಉಡುಪಿ : ರಾಜ್ಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿಗಳಾಗಿ ಆಯ್ಕೆಯಾದ ರಾಜೀವ್ ಶೆಟ್ಟಿ ರವರಿಗೆ ಸನ್ಮಾನ ಕಾರ್ಯಕ್ರಮವು ಇಂದು ನಗರದ ಬ್ರಹ್ಮಗಿರಿಯ ರೆಡ್‌ಕ್ರಾಸ್ ಭವನದಲ್ಲಿ ಜಿಲ್ಲಾ ರೆಡ್‌ಕ್ರಾಸ್ ಘಟಕ ಮತ್ತು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ವತಿಯಿಂದ ನಡೆಯಿತು. ಸನ್ಮಾನ ಸ್ವೀಕರಿಸಿದ ಬಸ್ರೂರು ರಾಜೀವ ಶೆಟ್ಟಿಯವರು ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಸಮಾನವಾಗಿ ನೋಡಿಕೊಳ್ಳುವುದರೊಂದಿಗೆ ಉಡುಪಿ ಜಿಲ್ಲೆಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದ ಅವರು, ತಮ್ಮ ಸೇವಾ ಅನುಭವವನ್ನು ಹಂಚಿಕೊಂಡರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲ ಸಿ.ಕೆ ಮಾತನಾಡಿ, ರಾಜ್ಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿಗಳಾಗಿ ಆಯ್ಕೆಯಾದ ಬಸ್ರೂರು ರಾಜೀವ ಶೆಟ್ಟಿಯವರು ತಮ್ಮ ಸೇವಾಅನುಭವವನ್ನು ತಮ್ಮ ವೃತ್ತಿ ಜೀವನದಲ್ಲಿ ಮುನ್ನಡೆಸಿಕೊಂಡು ಹೋಗುತ್ತಾರೆ ಎಂಬ ಆಶಾ ಭಾವನೆ ನಮ್ಮಲ್ಲಿದೆ. ರೆಡ್‌ಕ್ರಾಸ್ ಸಂಸ್ಥೆಯ ಮೂಲಕ ರಾಜ್ಯಕ್ಕೆ ವಿದ್ಯಾರ್ಥಿ ಶಕ್ತಿಯನ್ನು ಪಸರಿಸುವ ಕೆಲಸ ಮಾಡುವ ಧ್ಯೇಯ ಹೊಂದಿರುವ ಇವರು, ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯ ಡಿ.ಡಿ.ಆರ್.ಸಿ ಸಂಸ್ಥೆಗೆ ರಾಜ್ಯದಿಂದ ಇನ್ನಷ್ಟು ಹೆಚ್ಚು ಉತ್ತಮ ಸೇವೆ ಹಾಗೂ ಸೌಲಭ್ಯಗಳನ್ನು ನೀಡುವಂತಾಗಲಿ ಎಂದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಮಾತನಾಡಿ, ಇದೊಂದು ವಿಶಿಷ್ಠ ಕಾರ್ಯಕ್ರಮವಾಗಿದ್ದು, ಸಮಾಜಮುಖಿ ಕಾರ್ಯವನ್ನು ರಾಜೀವ ಶೆಟ್ಟಿಯವರು ಅಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ. ಅವರ ಈ ಉತ್ತಮ ಸೇವೆಗೆ ಉನ್ನತ ಸ್ಥಾನ ದೊರಕಿರುವುದು ಸಂತಸದ ವಿಷಯ ಎಂದರು. ಜಿಲ್ಲಾ ರೆಡ್‌ಕ್ರಾಸ್ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಮಾತನಾಡಿ, ಉತ್ತಮ ವ್ಯಕ್ತಿತ್ವ ಹಾಗೂ ನಾಯಕತ್ವದ ಗುಣ ಹೊಂದಿರುವ ಬಸ್ರೂರು ರಾಜೀವ ಶೆಟ್ಟಿಯವರು ರಾಜ್ಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿಯಾಗಿರುವುದು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದೆ. ಹಲವಾರು ಏಳು-ಬೀಳುಗಳನ್ನು ಎದುರಿಸಿ ಇಂದು ಉನ್ನತ ಸ್ಥಾನ ಪಡೆದಿದ್ದು, ಉತ್ತಮ ಆಯಸ್ಸು, ಆರೋಗ್ಯ
ಹೊಂದುವಂತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ರತ್ನ ಸುವರ್ಣ, ರಾಜ್ಯ ರೆಡ್‌ಕ್ರಾಸ್ ರಾಜ್ಯ ಪ್ರತಿನಿಧಿಗಳಾಗಿದ್ದ ವಿ.ಜಿ. ಶೆಟ್ಟಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಯೋಜನಾಧಿಕಾರಿ ಶಿವಾಜಿ.ಎ.ಕೆ, ರೆಡ್‌ಕ್ರಾಸಿನ ಆಡಳಿತ ಮಂಡಳಿ ಸದಸ್ಯ ಚಂದ್ರಶೇಖರ್, ರೆಡ್‌ಕ್ರಾಸಿನ ಮಾಜಿ ಕಾರ್ಯದರ್ಶಿಗಳಾದ ಬಾಲಕೃಷ್ಣ ಶೆಟ್ಟಿ ಮತ್ತು ರತ್ನಾಕರ ಶೆಟ್ಟಿ, ಡಿಡಿಆರ್‌ಸಿ ನೋಡಲ್ ಅಧಿಕಾರಿ ಜಯಶ್ರೀ, ಡಿಡಿಆರ್‌ಸಿ ಹಾಗೂ ರೆಡ್‌ಕ್ರಾಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ರೆಡ್‌ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಸ್ವಾಗತಿಸಿ ನಿರೂಪಿಸಿದರೆ, ರೆಡ್‌ಕ್ರಾಸ್ ಖಚಾಂಚಿ ರಮಾದೇವಿ ವಂದಿಸಿದರು.