ಉಡುಪಿ: ಉಡುಪಿ ನಗರದ ಬನ್ನಂಜೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸನಿಹ ಹಾದುಹೋಗುವ 169ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಕ್ರೀಟ್ ಕಿತ್ತೆದ್ದು ಹೋಗಿ ಅಪಾಯಕಾರಿ ಗುಂಡಿಗಳು ಉಂಟಾಗಿವೆ.

ರಸ್ತೆಯಲ್ಲಿನ ಕಂಬಿಗಳು ಮೇಲೆದ್ದಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಅಪಾಯ ಆಹ್ವಾನಿಸುತ್ತಿದೆ. ಈ ಸ್ಥಳದಲ್ಲಿ ಕಳೆದ ಕೆಲವು ದಿನಗಳಿಂದ ವಾಹನಗಳು ನಿಯಂತ್ರಣ ತಪ್ಪುವ ಘಟನೆಗಳು ನಡೆದಿದ್ದು, ಪಾದಚಾರಿಗಳು ಕಾಲು ಸಿಲುಕಿ ಗಾಯಗೊಂಡಿರುವ ಘಟನೆಗಳೂ ವರದಿಯಾಗಿವೆ.

ನವೆಂಬರ್ 28ರಂದು ಇದೇ ಹೆದ್ದಾರಿಯ ಮಾರ್ಗದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಆದಿಉಡುಪಿ ಹೆಲಿಪ್ಯಾಡ್‌ನಿಂದ ಶ್ರೀಕೃಷ್ಣ ಮಠಕ್ಕೆ ಬಂದು ಮರಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಬೆಂಗಾವಲು ಪಡೆಯ ವಾಹನಗಳು ಮತ್ತು ಮಂತ್ರಿಗಳ ಕವಾಟಗಳು ವೇಗವಾಗಿ ಸಂಚರಿಸಲಿರುವುದರಿಂದ, ರಸ್ತೆಯ ದುಸ್ಥಿತಿ ಗಂಭೀರ ಆತಂಕ ಹುಟ್ಟಿಸಿದೆ.

ಜಿಲ್ಲಾ ಆಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಕ್ಷಣ ಕ್ರಮ ಕೈಗೊಂಡು ಶಿಥಿಲಗೊಂಡಿರುವ ರಸ್ತೆ ಭಾಗವನ್ನು ದುರಸ್ತಿ ಮಾಡಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.



