ಉಡುಪಿ : ಬದುಕು ಬಯಸಿದಂತಲ್ಲ, ಬಂದಂತೆ ಎಂಬ ಮಾತಿನಂತೆ ಬದುಕಿನಲ್ಲಿ ಏನು ಬರುತ್ತದೋ ಅದನ್ನು ಸ್ವೀಕಾರ ಮಾಡಿ ಬದುಕಬೇಕು, ಅದೇ ನಮ್ಮ ಜೀವನವಾಗಿರಬೇಕು ಎಂಬುದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಏನೆಲ್ಲಾ ತನಗೆ ಬೇಕೋ ಅದೆನೆಲ್ಲವನ್ನು ಅವರು ಸಿದ್ಧಿಸಿಕೊಂಡಿರುವ ಲಕ್ಷ್ಮೀ ಮಚ್ಚಿನ ಅವರು ಎಲ್ಲಾ ಜಾತಿ, ಧರ್ಮ, ರಾಜಕೀಯ ಪಕ್ಷದವರು ಪ್ರೀತಿಸುವ ವ್ಯಕ್ತಿತ್ವವುಳ್ಳಂತಹ ವ್ಯಕ್ತಿ ಎಂದು ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ ಹೇಳಿದರು.

ಅವರು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕುಂದಾಪುರದ ಭಂಡಾರ್‌ಕರ‍್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಲಕ್ಷ್ಮೀ ಮಚ್ಚಿನ ಮಾತನಾಡಿದರು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಜಾನ್ ಡಿಸೋಜ ಶುಭಾಶಂಸನೆಗೈದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಸುಬ್ರಹ್ಮಣ್ಯ ಭಟ್ (ಸುಜಿ ಕುರ್ಯ), ಭಂಡಾರ್‌ಕರ‍್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರ ಆಚಾರ್ಯ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಯು.ಎಸ್.ಶೆಣೈ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ ಉಪಸ್ಥಿತರಿದ್ದರು.

ಇದೇ ಸಂದರ್ಭ ಎಸ್.ಸುಬ್ರಹ್ಮಣ್ಯ ಭಟ್ (ಸುಜಿ ಕುರ್ಯ), ನಜೀರ್ ಪೊಲ್ಯ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ನೂತನ ಕಾರ್ಯದರ್ಶಿ ಟಿ.ಲೋಕೇಶ ಆಚಾರ್ಯ ತೆಕ್ಕಟ್ಟೆ, ಬಿ.ರಾಘವೇಂದ್ರ ಪೈ ಗಂಗೊಳ್ಳಿ, ಚಂದ್ರಮ ತಲ್ಲೂರು ಮತ್ತು ಯೋಗೀಶ್ ಕುಂಭಾಶಿ ಅವರನ್ನು ಗೌರವಿಸಲಾಯಿತು. ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಬಿ.ರಾಘವೇಂದ್ರ ಪೈ ಸ್ವಾಗತಿಸಿದರು. ಪತ್ರಕರ್ತ ಪ್ರಶಾಂತ ಪಾದೆ ಸನ್ಮಾನ ಪತ್ರ ವಾಚಿಸಿದರು. ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್.ಬೀಜಾಡಿ ವಂದಿಸಿದರು.



