ಉಡುಪಿ : ಕಾರ್ಕಳದ ಕುಂಟಲ್ಪಾಡಿಯ ರಸ್ತೆಯ ಪಕ್ಕದಲ್ಲಿ ಸೋಮವಾರ ತಡರಾತ್ರಿ ಬರ್ಬರವಾಗಿ ವ್ಯಕ್ತಿ ಯೋರ್ವನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ಮಂಗಳೂರು ಮೂಲದ ನವೀನ್ ಪೂಜಾರಿ (50) ಕೊಲೆಯಾದ ವ್ಯಕ್ತಿ. ಕಾರ್ಕಳದ ಎಸ್ ಜೆ ಆರ್ಕೇಡ್ ನಲ್ಲಿ ಬಡ್ಡಿ ವ್ಯವಹಾರ ನಡೆಸಿಕೊಂಡಿದ್ದ ಈತನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಕಳೆದ ಮೂರು ದಿನಗಳಿಂದ ಇಬ್ಬರ ನಡುವೆ ಜಗಳ ಮುಂದುವರಿದಿತ್ತು ಎನ್ನಲಾಗಿದೆ. ನಿನ್ನೆ ತಡರಾತ್ರಿ ಕೊಲೆಯಾದ ನವೀನ್ ಮತ್ತು ಆರೋಪಿ ಕಾರ್ಕಳದ ಬಾರ್ ಒಂದರಲ್ಲಿ ಒಟ್ಟಿಗೆ ಕುಳಿತು ಕುಡಿದಿದ್ದಾರೆ. ಈ ವೇಳೆಯೇ ಜಗಳವಾಡುತ್ತಿದ್ದನ್ನು ಕೆಲವರು ಗಮನಿಸಿದ್ದರು ಎನ್ನಲಾಗಿದೆ. ಬಾರ್ ಬಂದ್ ಆದ ಬಳಿಕ ಅಲ್ಲಿಂದಲೇ ಜಗಳವಾಡುತ್ತಾ ಬಂದಿದ್ದು ಇಬ್ಬರು, ಕುಂಟಲ್ಪಾಡಿ ಬಸ್ ನಿಲ್ದಾಣದ ಬಳಿಕ ಬರುವಾಗ ಜಗಳ ತಾರಕ್ಕೇರಿದೆ, ವಾಗ್ವಾದ ಹಲ್ಲೆಗೆ ತಿರುಗಿ ಆರೋಪಿ ಚಾಕುವಿನಿಂದ ನವೀನ್ ಗೆ ಇರಿದಿದ್ದಾನೆ. ಆರೋಪಿ ಜೊತೆಗೆ ಇದ್ದ ಸ್ಥಳಿಯ ವ್ಯಕ್ತಿ ಗಂಭೀರ ಸ್ಥಿತಿಯಲ್ಲಿ ನವೀನ್ ನನ್ನು ಆಸ್ಪತ್ರೆಗೆ ಸೇರಿಸುವ ಯತ್ನದಲ್ಲಿದ್ದಾಗ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಘಟನಾಸ್ಥಳಕ್ಕೆ ಉಡುಪಿ ಎಸ್‌ಪಿ ಹರಿರಾಂ ಶಂಕರ್, ಕಾರ್ಕಳ ಉಪವಿಭಾಗದ ಎಎಸ್ಪಿ ಡಾ. ಹರ್ಷಪ್ರಿಯಂವದ, ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್., ನಗರ ಠಾಣೆ ಎಸ್ಐ ಮುರಳೀಧರ್ ನಾಯ್ಕ್, ಗ್ರಾಮಾಂತರ ಠಾಣೆ ಎಸ್ಐ ಪ್ರಸನ್ನ ಎಂ.ಎಸ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ನವೀನ್ ಪೂಜಾರಿ ಹಣಕಾಸು ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದ್ದು, ಕೊಲೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ, ಪೊಲೀಸರು ತನಿಖೆ ಆರಂಭಿಸಿದ್ದು, ಕೊಲೆಯ ನಿಖರ ಕಾರಣ ಮತ್ತು ಪರಾರಿಯಾದ ಆರೋಪಿಯ ಪತ್ತೆಗಾಗಿ ಪೊಲೀಸ್ ರು ಹುಡುಕಾಟ ನಡೆಸುತ್ತಿದ್ದಾರೆ.