ಉಡುಪಿ: ಇಂದು ಕೋಮುವಾದಿಗಳಲ್ಲಿ ಮುಸ್ಲಿಂ ಸಮುದಾಯದ ಪ್ರಗತಿಯ ಬಗ್ಗೆ ಆತಂಕವಿದೆ. ಆ ಕಾರಣಕ್ಕಾಗಿ ಸಮುದಾಯವನ್ನು ಗುರಿ ಮಾಡಲಾಗುತ್ತಿದೆ. ನಾವು ನಮ್ಮ ಸಮುದಾಯವನ್ನು ಮತ್ತಷ್ಟು ಅಭಿವೃದ್ಧಿ ಹೊಂದಲು, ಶ್ರೈಕ್ಷಣಿಕವಾಗಿ ಬೆಳವಣಿಗೆ ಹೊಂದಲು ಸಂಪೂರ್ಣ ಪ್ರಯತ್ನದಲ್ಲಿ ತೊಡಗಿಸಿಕೊಳ್ಳಬೇಕು. ಮುಸ್ಲಿಂ ಸಮುದಾಯದ ಯುವಜನತೆ ನಾಗರೀಕ ಸೇವಾ ಪರೀಕ್ಷೆ ಬರೆಯುವಂತಹ ವಾತಾವರಣ ಸೃಷ್ಟಿಸಬೇಕು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಮತ್ತು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ವೌಲಾನ ಸಯ್ಯದ್ ತನ್ವೀರ್ ಹಾಶ್ಮಿ ಸಾಹೇಬ್ ಬಿಜಾಪುರ ಹೇಳಿದ್ದಾರೆ. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಉಡುಪಿ ಪುರಭವನದ ಮಿನಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ‘ಪ್ರಸಕ್ತ ಸನ್ನಿವೇಶ ಮತ್ತು ನಮ್ಮ ಜವಾಬ್ದಾರಿಗಳು’ ಕುರಿತು ವಿಚಾರಗೋಷ್ಠಿಯಲ್ಲಿ ಅವರು ವಿಷಯ ಮಂಡನೆ ಮಾಡಿದರು.

ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಸಮಸ್ಯೆಗಳನ್ನು ಸುಧಾರಿಸಲು, ಇಸ್ಲಾಮಿ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಸಂಪೂರ್ಮ ಅಳವಡಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. ಸಮುದಾಯವು ಸಮಾಜ ಸೇವೆಯಲ್ಲಿ ವ್ಯಾಪಕವಾಗಿ ತೊಡಗಿಸಿ ಕೊಳ್ಳಬೇಕು. ಬಡವರ ನೆರವಿಗೆ ಧಾವಿಸಬೇಕು. ಮುಸ್ಲಿಮೇತರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಬೇಕು. ಹಬ್ಬಗಳ ಸಂದರ್ಭದಲ್ಲಿ ಮುಸ್ಲಿಮೇತರ ಸಹೋದರರನ್ನು ಕರೆದು ಹಬ್ಬದ ಸಂತೋಷವನ್ನು ಹಂಚಿಕೊಳ್ಳಬೇಕು ಎಂದರು. ಮುಸ್ಲಿಮರು ಧಾರ್ಮಿಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಸಂಪೂರ್ಣವಾಗಿ ಅಳವಡಿಸಬೇಕು. ನಮ್ಮ ನಮ್ಮ ಕುಟುಂಬದಲ್ಲಿ ಇಸ್ಲಾಮಿ ಮೌಲ್ಯಗಳನ್ನು ಸಂಸ್ಥಾಪಿಸಬೇಕಾಗಿದೆ. ನಮ್ಮ ಮಕ್ಕಳಲ್ಲಿ, ಮಹಿಳೆಯರಲ್ಲಿ, ಪುರುಷರಲ್ಲಿ ಇಸ್ಲಾಮಿ ಮೌಲ್ಯಗಳನ್ನು ಬೆಳೆಸಬೇಕು. ಮಕ್ಕಳಿಗೆ ಶಿಕ್ಷಣದ ಅರಿವು ಮೂಡಿಸಿ ಸಮುದಾಯದಲ್ಲಿ ಶ್ರೈಕ್ಷಣಿಕ ಮೂಡಿಸಬೇಕಾಗಿದೆ ಎಂದು ಅವರು ತಿಳಿಸಿದರು. ‘ಸಾಮಾಜಿಕ ಜಾಲಾತಾಣದಲ್ಲಿ ಸಮುದಾಯದ ಯುವಕರು ಆಕ್ಷೇಪಾರ್ಹ ಪೋಸ್ಟ್ಗಳು ಮಾಡದಂತೆ ಜಾಗೃತಿ ಮೂಡಿಸಬೇಕು. ಗೋಧಿ ಮಿಡಿಯಾ, ಸಾಮಾಜಿಕ ಜಾಲಾತಾಣದ ದ್ವೇಷಪೂರಿತ ವಾತಾವರಣ ಹಾಗೂ ಕೋಮು ವಾದದ ಕ್ಷೋಭೆಗಳಿಂದ ನಮ್ಮ ಸಮುದಾಯ ದೂರ ಇರಬೇಕು’ ಎಂದರು. ಅಖಿಲ ಭಾರತ ಮಿಲ್ಲಿ ಕೌನ್ಸಿಲ್‌ನ ಸಹಾಯಕ ಪ್ರಧಾನ ಕಾರ್ಯದರ್ಶಿ ಮತ್ತು ವಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ ಆಂದೋಲನದ ಕರ್ನಾಟಕ ಸಹ ಸಂಚಾಲಕ ಸುಲೈಮಾನ್ ಖಾನ್ ಸಾಹೇಬ್ ಬೆಂಗಳೂರು ಮಾತನಾಡಿದರು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ವೌಲಾ ವಹಿಸಿದ್ದರು.

ಈ ಸಂದರ್ಭದಲ್ಲಿ ಒಕ್ಕೂಟದ ಸದಸ್ಯ, ಲೇಖಕ ಮುಸ್ತಾಕ್ ಹೆನ್ನಾಬೈಲ್ ಬರೆದ ಧರ್ಮಾಧರ್ಮ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ಒಕ್ಕೂಟದ ಹಿರಿಯ ಉಪಾಧ್ಯಕ್ಷ ರಫೀಕ್ ಕುಂದಾಪುರ, ಉಪಾಧ್ಯಕ್ಷರಾದ ಶಭಿ ಕಾಝಿ, ಫರೀದ್ ಶೇಖ್, ಫಯಾಝ್ ಬೈಂದೂರು ಉಪಸ್ಥಿತರಿದ್ದರು. ಉಡುಪಿ ಜಾಮೀಯ ಮಸೀದಿಯ ಇಮಾಮ್ ವೌಲಾನ ರಶೀದ್ ಉಮ್ರಿ ಕುರಾನ್ ಪಠಿಸಿದರು. ಕಾರ್ಯಕ್ರಮ ಸಂಚಾಲಕ ವೌಲಾನ ಝಮೀರ್ ಅಹ್ಮದ್ ರಶಾದಿ ಸ್ವಾಗತಿಸಿದರು. ಒಕ್ಕೂಟದ ಮಾಜಿ ಜಿಲ್ಲಾಧ್ಯಕ್ಷ ಎಂ.ಪಿ.ಮೊದಿನಬ್ಬ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ಕಟಪಾಡಿ ವಂದಿಸಿದರು. ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು