ಉಡುಪಿ : ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನವೆಂಬರ್ 28ರಂದು ನಡೆಯಲಿರುವ ಲಕ್ಷಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿಗಳ ಕಚೇರಿ (ಪಿಎಂಒ) ಅಧಿಕೃತವಾಗಿ ದೃಢಪಡಿಸಿದೆ. ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪಿಎಂಒ ಪತ್ರ ಬರೆದಿದ್ದು, ಪ್ರಧಾನಿ ಮೋದಿ ಅವರ ಉಡುಪಿ ಭೇಟಿಯ ಸಂಪೂರ್ಣ ವೇಳಾಪಟ್ಟಿಯನ್ನು ಹಂಚಿಕೊಂಡಿದೆ.

ಪಿಎಂಒ ಮಾಹಿತಿ ಪ್ರಕಾರ, ಪ್ರಧಾನಿ ಮೋದಿ ಬೆಳಿಗ್ಗೆ 11.05ಕ್ಕೆ ದೆಹಲಿಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಕೇವಲ ಐದು ನಿಮಿಷಗಳ ಬಳಿಕ 11.10ಕ್ಕೆ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಪ್ರಯಾಣಿಸಲಿದ್ದಾರೆ. ಅವರು ಬೆಳಿಗ್ಗೆ 11.35ಕ್ಕೆ ಉಡುಪಿ ಹೆಲಿಪ್ಯಾಡ್ ತಲುಪಲಿದ್ದಾರೆ. ಈ ಹಿಂದೆ ಉಡುಪಿಯಲ್ಲಿ ಯೋಜಿಸಲಾಗಿದ್ದ ರೋಡ್ ಶೋ ರದ್ದುಗೊಂಡಿದ್ದು, ಪ್ರಧಾನಿ ನೇರವಾಗಿ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಲಿದ್ದಾರೆ. ಬೆಳಿಗ್ಗೆ 12 ಗಂಟೆಗೆ ಪ್ರಧಾನಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದು, ಸುವರ್ಣತೀರ್ಥ ಮಂಟಪ ಮತ್ತು ಕನಕನ ಕಿಂಡಿಗೆ ಸ್ವರ್ಣ ಕವಚ ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಶ್ರೀಕೃಷ್ಣನ ದರ್ಶನ ಪಡೆದು ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಭಗವದ್ಗೀತೆಯ 10 ಶ್ಲೋಕಗಳನ್ನು ಸ್ವತಃ ಪಠಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಭಕ್ತರು ಒಂದೇ ಸಮಯದಲ್ಲಿ ಭಗವದ್ಗೀತಾ ಪಠಣದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ಮಧ್ಯಾಹ್ನ 1.35ಕ್ಕೆ ಉಡುಪಿ ಹೆಲಿಪ್ಯಾಡ್ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲಿದ್ದು, ಅಲ್ಲಿಂದ 2 ಗಂಟೆಗೆ ಗೋವಾ ಕಡೆಗೆ ವಿಮಾನ ಏರಲಿದ್ದಾರೆ. ಪಿಎಂಓ ರಾಜ್ಯ ಸರ್ಕಾರಕ್ಕೆ ಭದ್ರತಾ ವ್ಯವಸ್ಥೆಗಳನ್ನೆಚ್ಚರಿಕೆಯಿಂದ ಜಾರಿಮಾಡುವಂತೆ ಸೂಚಿಸಿದ್ದು, ಎಸ್ಪಿಜಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.



