ಉಡುಪಿ : ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಂದು ಆಯೋಜಿಸಲಾಗಿದ್ದ ಮ್ಯಾರಥಾನ್ ಓಟದ ವೇಳೆ ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ಎಸ್ಐ ನಾಸಿರ್ ಹುಸೇನ್ (58) ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಜಿಲ್ಲಾ ಪೊಲೀಸ್ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಂಬ ಘೋಷವಾಕ್ಯದೊಂದಿಗೆ, ಡ್ರಗ್ಸ್ ಮುಕ್ತ ಕರ್ನಾಟಕ ಎಂಬ ಧ್ಯೇಯದಡಿ 5 ಕಿ.ಮೀ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ನೂರಾರು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದ ಈ ಓಟದ ವೇಳೆ ನಗರದ ತಾಲೂಕು ಪಂಚಾಯತ್ ಮುಂಭಾಗದ ರಸ್ತೆಯಲ್ಲಿ ನಾಸಿರ್ ಹುಸೇನ್ ಏಕಾಏಕಿ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಪಕ್ಕದಲ್ಲಿದ್ದ ಡಾ. ಟಿಎಂಎ ಪೈ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

2010 ಬ್ಯಾಚ್‌ನ ಪೊಲೀಸ್ ಅಧಿಕಾರಿ ಆಗಿದ್ದ ನಾಸಿರ್ ಹುಸೇನ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯವರು. ಇತ್ತೀಚೆಗೆ ಶೆಟ್ಟಿಕಟ್ಟೆ ಅಪಘಾತ ಪ್ರಕರಣದ ಬಳಿಕ ಅವರನ್ನು ಅಧಿಕಾರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಕುಂದಾಪುರ ಗ್ರಾಮಾಂತರ ಠಾಣೆಗೆ ನಿಯೋಜನೆಗೊಂಡಿದ್ದರು. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದ ನಾಸಿರ್ ಹುಸೇನ್ ಅವರ ಅಕಾಲಿಕ ನಿಧನಕ್ಕೆ ಪೊಲೀಸ್ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.



