Saturday, March 14, 2026

spot_img

ಪೆರ್ಡೂರು ದೇವಸ್ಥಾನದ ಹಿಂದಿನ ಸಮಿತಿ ರದ್ದಾಗಲು ಒಳ ಜಗಳವೇ ಕಾರಣ: ರಾಜ್ ಕುಮಾರ್ ಶೆಟ್ಟಿ ದೊಡ್ಮನೆ

ಉಡುಪಿ: ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಹಿಂದಿನ ವ್ಯವಸ್ಥಾಪನಾ ಸಮಿತಿ ರದ್ದಾಗಲು ಅವರೊಳಗಿನ ಭಿನ್ನಾಭಿಪ್ರಾಯ ಮತ್ತು ಒಳ ಜಗಳವೇ ಪ್ರಮುಖ ಕಾರಣವಾಗಿದ್ದು, ಈಗಿನ ವ್ಯವಸ್ಥಾಪನಾ ಸಮಿತಿ ಅಥವಾ ಕಾಂಗ್ರೆಸ್ ಸರ್ಕಾರ ಇದಕ್ಕೆ ಕಾರಣವಲ್ಲ ಎಂದು ಸಮಿತಿಯ ಸದಸ್ಯ ರಾಜ್ ಕುಮಾರ್ ಶೆಟ್ಟಿ ದೊಡ್ಮನೆ ಸ್ಪಷ್ಟಪಡಿಸಿದರು. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯರಾದ ಸುರೇಶ್ ಸೇರ್ವೇಗಾರ ಅವರು ಈ ಹಿಂದೆ ಮಾಡಿರುವ ಆರೋಪಗಳು ಹಾಗೂ ನೀಡಿರುವ ಹೇಳಿಕೆಗಳು ಸತ್ಯಕ್ಕೆ ದೂರವಾದವು ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದಿನ ವ್ಯವಸ್ಥಾಪನಾ ಸಮಿತಿ ರದ್ದುಗೊಂಡಿದೆ ಎಂಬ ಹೇಳಿಕೆಯನ್ನು ಸುರೇಶ್ ಸೇರ್ವೇಗಾರ ನೀಡುತ್ತಿರುವುದು ತಪ್ಪು ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮುನ್ನವೇ ಸಮಿತಿಯನ್ನು ರದ್ದುಗೊಳಿಸಲಾಗಿತ್ತು. ಹಿಂದಿನ ವ್ಯವಸ್ಥಾಪನಾ ಸಮಿತಿ ಸದಸ್ಯರು ಒಳ ಜಗಳದಲ್ಲೇ ಮೂರು ವರ್ಷ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಕಾಲಹರಣ ಮಾಡಿದ್ದರು. ಅಲ್ಲದೆ ಅಂದಿನ ಸಮಿತಿ ಸದಸ್ಯರಾಗಿದ್ದ ರಾಮಮೂರ್ತಿ ಹೆಬ್ಬಾರ್ ಅವರು ಇದೊಂದು ಕಾಲಹರಣ ಮಾಡುವ ರಾಜಕೀಯ ಪೂರಿತ ಸಮಿತಿ ಎಂದು ಹೇಳಿ ರಾಜೀನಾಮೆ ಪತ್ರ ನೀಡಿದ್ದರು. ಜೀರ್ಣೋದ್ಧಾರ ಸಮಿತಿ ಹಾಗೂ ವ್ಯವಸ್ಥಾಪನಾ ಸಮಿತಿಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದ ಹಿನ್ನೆಲೆಯಲ್ಲಿ ನಾವು ಕೋರ್ಟ್‌ಗೆ ಕೇವಿಯೆಟ್ ಸಲ್ಲಿಸಿದ್ದೇವೆ. ಕೆಲಸ ಮಾಡದ ವ್ಯವಸ್ಥಾಪನಾ ಸಮಿತಿಯನ್ನು ರದ್ದುಪಡಿಸಬೇಕೆಂದು ಕೋರ್ಟ್‌ಗೆ ಹೋಗಿರುವುದು ಸತ್ಯ ಎಂದು ಹೇಳಿದರು.

ಈ ಹಿಂದೆ ದೇವಸ್ಥಾನದ ವಿಚಾರದಲ್ಲಿ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಸಂಜೆ ಬಿಜೆಪಿ ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಹೋಗುತ್ತಾರೆ. ನೀವು ಕೇವಲ ಬಿಜೆಪಿಯ ಶಾಸಕರಲ್ಲ; ದೇವಸ್ಥಾನದ ವಿಚಾರದಲ್ಲಿ ನಿಮ್ಮ ಕಾರ್ಯಕರ್ತರು ಹೇಳಿದ್ದಕ್ಕೆ ತಲೆ ಆಡಿಸುವುದು ಸರಿಯಲ್ಲ ಎಂದು ಅವರು ಟೀಕಿಸಿದರು.

 ಸೊರಕೆ ಅವರು ಸುರೇಶ್ ಸೇರ್ವೇಗಾರರನ್ನು ಎಲ್ಲಿಯೂ ತೇಜೋವಧೆ ಮಾಡಿಲ್ಲ. ಉದ್ದೇಶಪೂರ್ವಕವಾಗಿ ಸೇರ್ವೇಗಾರರ ಹೆಸರನ್ನು ಉಲ್ಲೇಖಿಸಿರುವುದಿಲ್ಲ ಎಂದು ಹೇಳಿದರು. ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ಸೊರಕೆ ಹಾಗೂ ಗುರ್ಮೆ ಸುರೇಶ್ ಶೆಟ್ಟಿ ಅವರ ಸಹಕಾರವೂ ಅಗತ್ಯವಾಗಿದೆ. ಈಗಿನ ವ್ಯವಸ್ಥಾಪನಾ ಸಮಿತಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹಾಗೂ ಮಾಡಿಸಿಕೊಳ್ಳಲು ಸಿದ್ಧವಾಗಿದೆ. ಸಮಿತಿಯ ಸದಸ್ಯರು ಒಗ್ಗೂಡಿ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು. ದೇವಸ್ಥಾನದ ವಿಚಾರದಲ್ಲಿ ಪ್ರತಿದಿನ ವಾಗ್ವಾದ ನಡೆಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.ಸುದ್ದಿಗೋಷ್ಠಿಯಲ್ಲಿ ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಮೋದ್ ರೈ, ತಾಂತ್ರಿಕ ಸಮಿತಿ ಸದಸ್ಯ ಸಂತೋಷ್ ಕುಲಾಲ್, ಸದಸ್ಯರಾದ ದಿನೇಶ್ ಪೂಜಾರಿ, ಲಲಿತಾಂಬ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles