ಉಡುಪಿ: ಮಿಷನ್ ಕಾಂಪೌಂಡ್ ನ ಪಿಡ್ಬ್ಲೂಡಿ ಕ್ವಾಟ್ರೆಸ್ ನಲ್ಲಿ ಸೌರ್ಪಣಿಕ ಬಿ ಬ್ಲಾಕ್ ನಲ್ಲಿ ಕಳ್ಳತನ ನಡೆಸಿದ್ದ ಅಂತರ್ ರಾಜ್ಯ ಮನೆ ಕಳ್ಳರನ್ನು ಉಡುಪಿ ಪೊಲೀಸ್ ರು ಬಂಧಿಸಿದ್ದಾರೆ. ಮಧ್ಯಪ್ರದೇಶ ಮೂಲದ ರಮೇಶ್ ಜವಾನ್ ಸಿಂಗ್(37), ಕಾಲಿಯಾ (25) ಬಂಧಿತ ಆರೋಪಿಗಳು.

ಜುಲೈ 20ರಂದು ಉಡುಪಿ ನಗರದ 76 ಬಡಗುಬೆಟ್ಟು ಗ್ರಾಮದ ಮಿಷನ್ ಕಾಂಪೌಂಡ್ ನ ಪಿಡ್ಬ್ಲೂಡಿ ಕ್ವಾಟ್ರೆಸ್ ನಲ್ಲಿ ಸೌರ್ಪಣಿಕ ಬಿ ಬ್ಲಾಕ್ ಗೆ ನುಗ್ಗಿದ ಕಳ್ಳರು, 80,970 ರೂಪಾಯಿ ಮೌಲ್ಯದ, 681.830 ಮಿಲಿ ಗ್ರಾಂನ ಬೆಳ್ಳಿ ಯ ಸೊತ್ತು, 4,250 ರೂಪಾಯಿ ಮೌಲ್ಯದ 470 ಮಿಲಿಗ್ರಾಂ ಚಿನ್ನ ಹಾಗೂ 1700 ರೂಪಾಯಿ ನಗದು ಹಣ ಕಳವು ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ತಂಡ ರಚಿಸಿ ಉಡುಪಿಯ ಸರ್ಕಸ್ ಗ್ರೌಂಡ್, ರಾಷ್ಟ್ರೀಯ ಹೆದ್ದಾರಿ 66 ಬಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಶೀಲಿಸಿ ಆರೋಪಿಗಳ ಮಾಹಿತಿ ಪಡೆದು, ಕಾರ್ಯಾಚರಣೆ ನಡೆಸಿ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಕಳವು ಮಾಡಿದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಉಡುಪಿ ನಗರ ಠಾಣೆಯಲ್ಲಿ 2024ರಲ್ಲಿ ದಾಖಲಾದ 3 ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಅಲ್ಲದೇ ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಳವು ಮಾಡಿರುವುದು ಅಲ್ಲದೇ ಮಹಾರಾಷ್ಟ್ರ ರಾಜ್ಯದಲ್ಲೂ ಸಹ ಕಳ್ಳತನ ನಡೆಸಿರುವ ಕುರಿತು ಪ್ರಕರಣ ದಾಖಲಾಗಿದೆ. ಜವಾನ ಸಿಂಗ್ ಮೇಲೆ 11 ಕಳ್ಳತನ ಪ್ರಕರಣಗಳು ಮತ್ತು ಕಾಲಿಯಾ ಮೇಲೆ ಉಡುಪಿ ಜಿಲ್ಲೆಯಲ್ಲಿ 3 ಪ್ರಕರಣಗಳು ದಾಖಲಾಗಿರುತ್ತದೆ. ವಿಶೇಷವಾಗಿ ಆರೋಪಿಗಳು ಶನಿವಾರ ಹಾಗೂ ಭಾನುವಾರದ ರಜಾ ದಿನಗಳಲ್ಲೇ ಕಳ್ಳತನ ಮಾಡುವ ಚಾಳಿ ಉಳ್ಳವರಾಗಿದ್ದು, ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದಲ್ಲಿ ಪರಾರಿಯಾಗಿರುವ ಇನ್ನೊಬ್ಬ ಆರೋಪಿಯ ಪತ್ತೆಗಾಗಿ ಪೊಲೀಸ್ ರು ಜಾಲ ಬೀಸಿದ್ದಾರೆ.