ಉಡುಪಿ: ರಾಜ್ಯದಲ್ಲಿ ನಡೆಯುತ್ತಿರುವ ಪವರ್ ಶೇರಿಂಗ್ ವಿವಾದ ಸಾರ್ವಜನಿಕ ಚರ್ಚೆಯ ವಿಷಯವಾಗಬಾರದು ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಸ್ಪಷ್ಟವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನರಿಗೆ ಬೇಕಾಗಿರುವುದು ಒಳ್ಳೆಯ ಸರ್ಕಾರ, ಭ್ರಷ್ಟಾಚಾರ ರಹಿತ ಹಾಗೂ ಸದೃಢ ಆಡಳಿತ ಎಂದು ಅವರು ಹೇಳಿದರು. ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ನೇರ ಅನುಕೂಲವಾಗಿದೆ. ನೇತೃತ್ವದ ಸರ್ಕಾರ ಜನರ ಹಸಿವು ನೀಗಿಸುವ ಕೆಲಸ ಮಾಡಿದೆ ಎಂದು ಅವರು ಪ್ರಶಂಸಿಸಿದರು.

ಸರ್ಕಾರ ಸುಭದ್ರವಾಗಿ ಇರಬೇಕು. ಇದು ಸಾರ್ವಜನಿಕರು ಹಾಗೂ ಕಾರ್ಯಕರ್ತರ ಅಭಿಲಾಷೆಯಾಗಿದೆ. ಸುಭದ್ರ ಆಡಳಿತ ನೀಡಲು ಸರ್ಕಾರ ನಿರಂತರವಾಗಿ ಪ್ರಯತ್ನಿಸಬೇಕು ಎಂದು ಹೇಳಿದರು. ಪವರ್ ಶೇರಿಂಗ್ ಕುರಿತು ಮಾತನಾಡುತ್ತಾ, ಅನಿವಾರ್ಯತೆ ಅಥವಾ ಅವಶ್ಯಕತೆ ಇದ್ದಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಬೇಕೇ ಹೊರತು, ನಾಯಕರೇ ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ. ಇದರಿಂದ ಜನರಲ್ಲಿ ಅಭದ್ರತೆ ಮೂಡುತ್ತದೆ ಎಂದು ಎಚ್ಚರಿಸಿದರು.

ಸಿಎಂ ಹಾಗೂ ಡಿಸಿಎಂ ನಡುವಿನ ಗೊಂದಲದ ಕುರಿತು ಪ್ರತಿಕ್ರಿಯಿಸಿದ ಮೊಯ್ಲಿ, ಏನೇ ಅಸಮಾಧಾನಗಳಿದ್ದರೂ ಕ್ಯಾಬಿನೆಟ್ ನಿರಾತಂಕವಾಗಿ ನಡೆಯುತ್ತಿದೆ. ಸರ್ಕಾರದ ಕಾರ್ಯಕ್ರಮಗಳು ಸುಗಮವಾಗಿ ಅನುಷ್ಠಾನಗೊಳ್ಳುತ್ತಿವೆ. ನಮಗೆ ಬೇಕಾಗಿರುವುದು ಅದಷ್ಟೇ ಎಂದು ಹೇಳಿದರು. ಅವರು ಪರಸ್ಪರ ಅಪ್ಪಿಕೊಳ್ಳಲಿ ಅಥವಾ ಮುನಿಸಿಕೊಳ್ಳಲಿ, ಜನರಿಗೆ ಬೇಕಾಗಿರುವುದು ಉತ್ತಮ ಆಡಳಿತ ಎಂದು ವ್ಯಂಗ್ಯವಾಡಿದರು. ವಾರಕ್ಕೊಮ್ಮೆ ಕ್ಯಾಬಿನೆಟ್ ಸಭೆಗಳು ನಡೆಯುತ್ತಿವೆ. ಬಿಕ್ಕಟ್ಟು ಇದ್ದರೆ ವಾರವಾರ ಸಭೆ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು. ಮಂತ್ರಿಯಾಗಬೇಕು, ಮುಖ್ಯಮಂತ್ರಿ ಆಗಬೇಕು ಎಂಬ ಹಂಬಲವು ತಪ್ಪಲ್ಲ. ಆದರೆ ಅದು ಸಾರ್ವಜನಿಕ ಚರ್ಚೆಯ ವಸ್ತುವಾಗಬಾರದು ಎಂದು ಹೇಳಿದರು.

ಮಹದೇವಪ್ಪ ದಲಿತ ಸಿಎಂ ಚರ್ಚೆಯ ಕುರಿತಾಗಿ ಪ್ರತಿಕ್ರಿಯಿಸಿದ ಮೊಯ್ಲಿ, ಯಾವುದೇ ಕಾರಣಕ್ಕೂ ಇಂತಹ ವಿಚಾರಗಳು ಸಾರ್ವಜನಿಕವಾಗಿ ಬರಬಾರದು ಎಂದು ಹೇಳಿದರು. ಪಕ್ಷದ ಹಿರಿಯನಾಗಿ ನಾನು ಸಲಹೆ ನೀಡುತ್ತಿದ್ದೇನೆ ಎಂದರು. 30 ಶಾಸಕರು ಸಚಿವರಾಗಲು ಇಚ್ಛೆ ವ್ಯಕ್ತಪಡಿಸಿರುವ ವಿಚಾರದ ಬಗ್ಗೆ ಮಾತನಾಡಿ, ಕ್ಯಾಬಿನೆಟ್‌ನಲ್ಲಿ ಕೆಲವರಿಗೆ ಮಾತ್ರ ಅವಕಾಶ ಸಿಗುತ್ತದೆ. ಒಬ್ಬರೇ ಮುಖ್ಯಮಂತ್ರಿ ಆಗಲು ಸಾಧ್ಯ. ಅನಗತ್ಯ ಚರ್ಚೆಗಳು ನಡೆಯಬಾರದು ಎಂದು ಹೇಳಿದರು.



