ಉಡುಪಿ : ಬದುಕು ಭಗವಂತನ ಕೊಡುಗೆ. ನಿಸ್ವಾರ್ಥ ಮನಸ್ಸಿನಿಂದ ಮಾಡಿದ ಸೇವೆ ಮಾತ್ರ ಭಗವಂತನಿಗೆ ತಲುಪುತ್ತದೆ. ದೇವರ ಉತ್ಸವಗಳಲ್ಲಿ ಪಾಲ್ಗೊಳ್ಳುವುದು ಪುಣ್ಯಕರ ಕಾರ್ಯ. ಉಡುಪಿಯ ಜನತೆಗೆ ಪರ್ಯಾಯ ಎನ್ನುವುದು ಭಗವತ್ಸೇವೆಯ ವಿಶಿಷ್ಟ ಅವಕಾಶ. ಅದರಲ್ಲಿ ಪಾಲುದಾರರಾಗುವುದೇ ಬದುಕಿನ ನಿಜವಾದ ಭಾಗ್ಯದ ದಾರಿ ಎಂದು ಪ್ರಖ್ಯಾತ ಲೇಖಕ, ಚಿಂತಕ ಎಂ.ಬಿ. ಪುರಾಣಿಕ್ ಅಭಿಪ್ರಾಯಪಟ್ಟರು.

ಅವರು ಪರ್ಯಾಯ ಸ್ವಾಗತ ಸಮಿತಿ ಆಯೋಜಿಸಿದ್ದ ಪರ್ಯಾಯ ಪೂರ್ವ ಅವಲೋಕನ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಪರ್ಯಾಯವು ಉಡುಪಿಯ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಐಕ್ಯತೆಯ ಸಂಕೇತವಾಗಿದೆ. ಎಲ್ಲರೂ ಇದರ ಯಶಸ್ಸಿಗೆ ತಮ್ಮ ಶಕ್ತಿಯಮಟ್ಟಿಗೆ ಸಹಕಾರ ನೀಡಬೇಕು ಎಂದರು.

ಸ್ವಾಗತ ಸಮಿತಿಯ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಅವರು ಸಭೆಯಲ್ಲಿ ಮಾತನಾಡಿ, ನವೆಂಬರ್ 7ರಂದು ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಡಾ. ವೀರೇಂದ್ರ ಹೆಗ್ಗಡೆ ಅವರು ಪರ್ಯಾಯ ಪೂರ್ವ ಅವಲೋಕನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಗೆ ಪರ್ಯಾಯ ಸಂಬಂಧಿತ ಎಲ್ಲಾ ಸಮಿತಿಯ ಸದಸ್ಯರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ವಿನಂತಿಸಿದರು.

ಶ್ರೀಮಠದ ದಿವಾನ ಡಾ. ಉದಯಕುಮಾರ ಸರಳತ್ತಾಯ ಅವರು ಪರ್ಯಾಯದ ಯಶಸ್ಸಿಗೆ ಭಕ್ತಜನರ ಸಹಕಾರ ಅಗತ್ಯವಿದೆ ಎಂದು ಹೇಳಿದರು. ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಗಡೆ ಅವರು ಪರ್ಯಾಯ ಪೂರ್ವಭಾವಿ ತಯಾರಿಗಳ ಕುರಿತು ವಿವರಿಸಿದರು. ಸಭೆಯಲ್ಲಿ ಗೋಪಾಲಕೃಷ್ಣ ಅಸ್ರಣ್ಣ, ಜಯಕರ ಶೆಟ್ಟಿ ಇಂದ್ರಾಳಿ, ಜಯಪ್ರಕಾಶ ಕೆದ್ಲಾಯ, ಪ್ರಸಾದ್ ರಾಜ್ ಕಾಂಚನ್, ಮೋಹನ್ ಭಟ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಶ್ವತ್ಥ ಭಾರದ್ವಾಜ್ ಸ್ವಾಗತಿಸಿ ನಿರೂಪಿಸಿದರು.



